ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ – ಹೀಗೆಲ್ಲ ಬದಲಾವಣೆ ಆಗಲಿದೆ ಹನುಮನ ನಾಡು

ಮಂಜುನಾಥ ಗಂಗಾವತಿ :

ಹನುಮ ಹುಟ್ಟಿದ ನಾಡು ಅಂಜನಾದ್ರಿ ಹಲವು ದಶಕಗಳಿಂದ ಅಭಿವೃದ್ಧಿ ಕಾಣದೇ ಮರಿಚಿಕೆಯಾಗಿತ್ತು. ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 2021-22, 2022-23ರ ಬಜೆಟ್ ಹಾಗೂ ಕೆಕೆಆರ್ಡಿಬಿಯಿಂದ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಗೆ 120 ಕೋಟಿ ರೂ. ಮೀಸಲಿಟ್ಟು, ಇಂದು ಕಾಮಗಾರಿಗೆ ಚಾಲನೆ ನೀಡಲಿದೆ.

ಕಿಷ್ಕಿಂದೆಯ ಅಂಜನಾದ್ರಿ ಪ್ರದೇಶವನ್ನು ಸ್ವಾತಂತ್ರ್ಯ ಬಂದಾಗಿನಿಂದ ಯಾವುದೇ ಸರ್ಕಾರಗಳು ಮನ್ನಣೆ ನೀಡಿರಲಿಲ್ಲ. 2019ರಲ್ಲಿ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿತು. ಅದರಂತೆ 2021-22ನೇ ಸಾಲಿನ ಬಜೆಟ್ ನಲ್ಲಿ 20 ಕೋಟಿ ರೂ. ನೀಡಲಾಯಿತು. 2022-23ನೇ ಸಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ 100 ಕೋಟಿ ರೂ. ನೀಡಿದ್ದು, ಕೆಕೆಆರ್ಡಿಬಿ ಯಿಂದ 20 ಕೋಟಿ ರೂ. ಸೇರಿ ಒಟ್ಟಾರೆ 120 ಕೋಟಿ ರೂ. ಮೀಸಲಿಡಲಾಗಿದೆ. ಈಗಾಗಲೇ ಮಾಸ್ಟರ್ನ್ ಪ್ಲ್ಯಾನ್ ಸಿದ್ದವಾಗಿದ್ದು, ವಿವಿಧ ಯೋಜನೆಗಳಿಗೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ 2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಧರ್ಮಪತ್ನಿ ಆಗಮಿಸಿ ಪೂಜೆ ಸಲ್ಲಿಸಿದ್ದರು. ಅಂದಿನಿಂದ ಅಂಜನಾದ್ರಿ ಬೆಟ್ಟವು ಮತ್ತಷ್ಟು ಪ್ರಸಿದ್ಧಗೊಳ್ಳಲು ಆರಂಭಿಸಿತು. ದಶಕದ ಹಿಂದೆ ಬೆರಳೆಣಿಕೆಯಷ್ಟು ಭಕ್ತರು ಬೆಟ್ಟದಲ್ಲಿ ಕಾಣಿಸುತ್ತಿದ್ದರು. ಅದರೀಗ ಪ್ರತಿದಿನ ಭಕ್ತ ಸಮೂಹ ಹೆಚ್ಚಾಗಿದೆ. ಲಕ್ಷಾಂತರ ಜನ ಬೆಟ್ಟ ಹತ್ತಿ ದರ್ಶನ ಪಡೆಯುತ್ತಿದ್ದಾರೆ. ಶನಿವಾರ ಮೆಟ್ಟಿಲುಗಳಲ್ಲಿ ದಟ್ಟಣೆ ಉಂಟಾಗಿರುತ್ತದೆ. ಅಷ್ಟೊಂದು ಪ್ರಸಿದ್ಧಿ ಪಡೆದಿದೆ.

ಮಾಸ್ಟರ್ ಪ್ಲ್ಯಾನ್ ನಲ್ಲಿ ಏನಿದೆ?:

ಅಂಜನಾದ್ರಿಗೆ ಆಗಮಿಸುವ ಭಕ್ತರು ತಂಗಲು ಯಾತ್ರಿ ನಿವಾಸ, ಶೌಚಾಲಯ ಸೇರಿ ಮೂಲಭೂತ ಸೌಕರ್ಯ, ರೋಪ್ ವೇ ನಿರ್ಮಾಣ, ಗಂಗಾವತಿಯಿಂದ ಹಿಟ್ನಾಳ್ ವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ, ಅಂಜನಾದ್ರಿ ವೈಭವ ತಿಳಿಸುವ ಲೇಸರ್ ತಂತ್ರಜ್ಞಾನ ಅಳವಡಿಕೆ, ಪೊಲೀಸ್ ಉಪಠಾಣೆ, ಅಂಜನಾದ್ರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ನಿರ್ಮಾಣ ಸೇರಿ ಸಮಗ್ರ ಅಭಿವೃದ್ಧಿಗೆ 61 ಎಕರೆ ಭೂಸ್ವಾಧೀನ ನಡೆಯಲಿದೆ. ಕಾಮಗಾರಿ ಎರಡು ಹಂತದಲ್ಲಿ ನಡೆಯಲಿದೆ.

“ಅಂಜನಾದ್ರಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದೇವೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರದ ಮುಂದೆ ಗಂಗಾವತಿ- ಅಂಜನಾದ್ರಿಗೆ ಕೇಬಲ್ ಕಾರ್ ಪ್ರಸ್ತಾವನೆ ಇಡಲಾಗಿದೆ.”
– ಕರಡಿ ಸಂಗಣ್ಣ, ಸಂಸದ

“ಗಂಗಾವತಿ ವಿಧಾನಸಭಾ ಕ್ಷೇತ್ರದ ಜನತೆಗೆ ಮಾತು ಕೊಟ್ಟಂತೆ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ. ಬಿಜೆಪಿ ಸರ್ಕಾರವು ನುಡಿದಂತೆ ನಡೆದುಕೊಂಡಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.”
– ಪರಣ್ಣ ಮುನವಳ್ಳಿ, ಶಾಸಕ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!