ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………
ಹೊಸದಿಗಂತ ವರದಿ, ಮಂಗಳೂರು:
ಕೊರೋನಾ ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಅವಧಿ ಆಗಿದ್ದರೂ ಜನರಿಗೆ ಎರಡನೇ ಡೋಸ್ ಸಿಗುತ್ತಿಲ್ಲ. ಸರಕಾರದ ಕೊರೋನಾ ಲಸಿಕೆ ಪ್ರಚಾರದ ಬ್ಯಾನರ್ ಗ್ರಾಮ ಗ್ರಾಮಗಳಿಗೆ ಹೋಗಿದೆಯೇ ವಿನಃ ಲಸಿಕೆ ಮಾತ್ರ ಹೋಗುತ್ತಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಲಸಿಕೆಯ ಮೊದಲ ಡೋಸ್ ಪಡೆದು ಗರಿಷ್ಠ ೮೪ ದಿನ ದಾಟಿದರೂ ೨ನೇ ಡೋಸ್ ನೀಡಲಾಗುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ 8.30 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಸ್ಟಾಕ್ ಇಲ್ಲ ಎನ್ನುವ ಕಾರಣಕ್ಕೆ 2ನೇ ಡೋಸ್ ಪಡೆಯಬೇಕಾದ ಅವಧಿಯನ್ನು ಗರಿಷ್ಠ 84 ದಿನಗಳಿಗೆ ಏರಿಕೆ ಮಾಡಿದ್ದರು. ಇದೀಗ ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದು ಗರಿಷ್ಠ 84 ದಿನ ಮೀರಿದವರು 5-6 ಲಕ್ಷ ಮಂದಿ ಇದ್ದಾರೆ. ವಾರಕ್ಕೆ ಬರುತ್ತಿರುವ ಲಸಿಕೆ ಕೇವಲ 50-60 ಸಾವಿರ ಮಾತ್ರ. 84 ದಿನ ಮೀರಿದರೂ 2ನೇ ಡೋಸ್ ನೀಡದಿದ್ದರೆ ಲಸಿಕೆ ಪಡೆದು ಏನು ಪ್ರಯೋಜನ? ಜನರನ್ನು ಯಾಕೆ ಸತಾಯಿಸುತ್ತೀರಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಸರಕಾರ ದಿನಕ್ಕೊಂದು ಆದೇಶ ಮಾಡುತ್ತಿರುವುದರಿಂದ ಅಧಿಕಾರಿಗಳು ಗೊಂದಲಕ್ಕೀಡಾಗುತ್ತಿದ್ದಾರೆ. ಲಸಿಕೆ ನೀಡಲು ಸಾಧ್ಯವಾಗದಿದ್ದರೆ ಇಷ್ಟೆಲ್ಲ ಪ್ರಚಾರ ಮಾಡಿದ್ದೇಕೆ? ಕೂಡಲೇ ಜಿಲ್ಲೆಯ ಶಾಸಕರು, ಸಂಸದ, ಉಸ್ತುವಾರಿ ಸಚಿವರು ಲಸಿಕೆ ಹೆಚ್ಚಿಸಲು ಬೇಡಿಕೆ ಇಡಬೇಕು. ವಾರಕ್ಕೆ ಕನಿಷ್ಠ 1.50 ಲಕ್ಷ ಡೋಸ್ ಆದರೂ ಸಿಗಬೇಕು. ಇಲ್ಲದಿದ್ದರೆ ಜನರಿಗೆ ಇವರು ಮೋಸ ಮಾಡುತ್ತಿದ್ದಾರೆ ಎಂದೇ ಅರ್ಥ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಅವರದ್ದೆನ್ನಲಾದ ಆಡಿಯೊ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಆ ಆಡಿಯೊ ಅಸಲಿಯೊ ನಕಲಿಯೊ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಲಿ. ಮುಖ್ಯಮಂತ್ರಿ ಮುಂದುವರಿಯುತ್ತಾರೋ ಇಲ್ಲವೇ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಲಿ. ಜನರನ್ನು ಗೊಂದಲದಲ್ಲಿ ಮುಳುಗಿಸಬೇಡಿ ಎಂದರು.