ಕೃಷ್ಣ ಜನ್ಮಭೂಮಿ ಮಥುರಾದ ಈದ್ಗಾ ಮಸೀದಿ ಸಮೀಕ್ಷೆಗೆ ಆದೇಶಿಸಿದ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎನ್ನಲಾಗುವ ಶಾಹಿ ಈದ್ಗಾ ಮಸೀದಿಯನ್ನು ಜನವರಿ 2 ರ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವಂತೆ ಸ್ಥಳೀಯ ನ್ಯಾಯಾಲಯವು ಆದೇಶಿಸಿದೆ. ಈ ಮೂಲಕ ಹಿಂದೂ ಸಂಘಟನೆಗಳು ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಬಲ ಸಿಕ್ಕಿದೆ.
ಬಲಪಂಥೀಯ ಸಂಘಟನೆ ಹಿಂದೂ ಸೇನೆಯ ವಿಷ್ಣು ಗುಪ್ತಾ ಅವರು ಸಲ್ಲಿಸಿದ ಮೊಕದ್ದಮೆಯನ್ನು ಆಲಿಸಿ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಇದು ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ನಡೆಸಲಾದ ಸಮೀಕ್ಷೆಯಂತೆಯೇ ಇರುತ್ತದೆ ಎಂದು ಹೇಳಿದೆ.
ಮಥುರಾದ ಕೃಷ್ಣ ಜನ್ಮಭೂಮಿ ಎಂಬುದು ನಿಸ್ಸಂದೇಹ. ಈ ನೆಲದ ಮೇಲೆ 17ನೇ ಶತಮಾನದಲ್ಲಿ  ಮುಸ್ಲಿಂ ದೊರೆಗಳು ತಮ್ಮ ಖಡ್ಗದ ಬಲದಿಂದ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದ್ದಾರೆ. ಈ ಮಸೀದಿ ತೆರವುಗೊಳಿಸಿ ಹಿಂದೂಗಳ ಪವಿತ್ರ ಸ್ಥಳವನ್ನು ಅವರಿಗೆ ಮರಳಿಸಬೇಕು ಎಂದು ಹಿಂದೂ ಸಂಘಟನೆಗಳು ಕೋರಿವೆ.
ಈ ಶಾಹಿ ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯ ಪುರಾತನ ಕತ್ರಾ ಕೇಶವ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ ನಿರ್ಮಿಸಲಾಯಿತು ಎಂದು ವಿಷ್ಣು ಗುಪ್ತಾ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ. ಶ್ರೀಕೃಷ್ಣನ ಜನ್ಮದಿಂದ ಮಂದಿರ ನಿರ್ಮಾಣದವರೆಗಿನ ಸಂಪೂರ್ಣ ಇತಿಹಾಸವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಅವರು, 1968ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ನಡುವೆ ಮಾಡಿಕೊಂಡಿರುವ ಒಪ್ಪಂದವನ್ನು ಕಾನೂನುಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಮಥುರಾ ನ್ಯಾಯಾಲಯವು ಕೃಷ್ಣ ಜನ್ಮಭೂಮಿ ಮೊಕದ್ದಮೆಯನ್ನು ಈ ಹಿಂದೆ ವಜಾಗೊಳಿಸಿತ್ತು. ಇದೀಗ ಮತ್ತೆ ಪುರಸ್ಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!