ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಗವಂತನ ಸೇವೆಯನ್ನು ಮಾಡಿದ್ದಾರೆ. ದೇಶದ ಪ್ರಜೆಗಳ ಒಳಿತಿಗಾಗಿ ಅತಿಶೀಘ್ರದಲ್ಲಿ 100 ಕೋಟಿ ಲಸಿಕೆಯನ್ನು ನೀಡಿದ ನಮ್ಮ ನೆಚ್ಚಿನ ಪ್ರಧಾನಿಯವರ ಜೊತೆ ಅವಿಶ್ರಾಂತವಾಗಿ ದುಡಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕರ್ತವ್ಯವು ನಿರಂತರವಾಗಿರಲಿ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶತಂತ್ರಿ ಕುಂಟಾರು ಹೇಳಿದರು.
ಸನ್ಮಾನ್ಯ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು ದೇಶದಲ್ಲಿ 100 ಕೋಟಿ ಲಸಿಕೆ ನೀಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾಸರಗೋಡು ಮಂಡಲದ ನೇತೃತ್ವದಲ್ಲಿ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿ ಪ್ರಧಾನ ವೈದ್ಯಾಧಿಕಾರಿ ಡಾ.ಸತ್ಯಶಂಕರ ಭಟ್ ಮಾತನಾಡುತ್ತಾ 100 ಕೋಟಿ ಲಸಿಕೆಯನ್ನು ನೀಡಿ ಕೋವಿಡ್ ನಿರ್ಮೂಲನೆಗೆ ನೇತೃತ್ವವನ್ನು ನೀಡಿದ ಪ್ರಧಾನಿಯವರಿಗೆ ಮೊದಲ ಶ್ರೇಯಸ್ಸು ಸಲ್ಲುತ್ತದೆ. ಅವರೊಂದಿಗೆ ಕೈಜೋಡಿಸಿದ ಭಾರತೀಯ ಔಷಧಿ ಉತ್ಪಾದನಾ ಸಂಸ್ಥೆಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕರ್ತವ್ಯವು ಶ್ಲಾಘನೀಯವಾಗಿದೆ.ಕಠಿಣ ಪರಿಶ್ರಮದಿಂದ ಕೋವಿಡ್ನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ. ಇದಕ್ಕೆ ದೇಶದ ಜನತೆಯ ಸಹಕಾರವೂ ಅತೀ ಅಗತ್ಯ ಎಂದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಪಿ.ರಮೇಶ್, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ, ಜಿಲ್ಲಾ ಸಮಿತಿ ಸದಸ್ಯ ಮಾಧವ ಮಾಸ್ತರ್, ಎಸ್.ಸಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಪುಷ್ಪಾ, ಪಕ್ಷದ ನೇತಾರರಾದ ಡಿ.ಶಂಕರ, ಬಾಲಕೃಷ್ಣ ಶೆಟ್ಟಿ, ಅಶ್ವಿನಿ ಮಲ್ಲಡ್ಕ, ಜಯಂತಿ ಕುಂಟಿಕಾನ, ಮಹೇಶ್ ವಳಕ್ಕುಂಜ, ಗೋಪಾಲಕೃಷ್ಣ ಮುಂಡೋಳುಮೂಲೆ, ವಿಜಯಸಾಯಿ ಬದಿಯಡ್ಕ, ಮೈರ್ಕಳ ನಾರಾಯಣ ಭಟ್ ಮೊದಲಾದವರು ಪಾಲ್ಗೊಂಡಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ.ಆರ್. ಸ್ವಾಗತಿಸಿ, ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಸಿಹಿತಿಂಡಿಯನ್ನು ಹಂಚಲಾಯಿತು.