Wednesday, August 10, 2022

Latest Posts

ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾನು’ ಆಂದೋಲನ

ಹೊಸದಿಗಂತ ವರದಿ, ಕೊಡಗು:

ಕನ್ನಡ ರಾಜ್ಯೋತ್ಸವಕ್ಕೆ ಪೂರಕವಾಗಿ ‘ಕನ್ನಡಕ್ಕಾಗಿ ನಾನು’ ಆಂದೋಲನವನ್ನು ಸಮರ್ಪಕವಾಗಿ, ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಯಿತು.
ನಗರದ ಕೊಡಗು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ ದರ್ಶನಾ ಮಾತನಾಡಿ, ಸರ್ಕಾರದ ಆದೇಶದಂತೆ ಕನ್ನಡ ರಾಜ್ಯೋತ್ಸವಕ್ಕೂ ಮುಂಚಿತವಾಗಿ ಆ.24 ರಿಂದ 31 ರವರೆಗೆ ಜಿಲ್ಲೆಯ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಬೇಕಿದೆ. ಅ. 28 ರಂದು ಬೆಳಗ್ಗೆ 11ಗಂಟೆಗೆ ನಾಡಗೀತೆಯಾಗಿರುವ “ಜಯ ಭಾರತ ಜನನಿಯ ತನು ಜಾತೆ” ಡಾ.ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಕೆ.ಎಸ್.ನಿಸಾರ್ ಅಹಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಈ ನಾಲ್ಕು ಗೀತೆಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಹಾಡುವ, ಹಾಗೂ ಸುಮಾರು ನಾಲ್ಕೈದು ನಿಮಿಷಗಳ ಕಾಲ ನಿರರ್ಗಳವಾಗಿ ಅನ್ಯ ಭಾಷೆಯ ಪದಗಳನ್ನು ಬಳಸದೆ ಕೇವಲ ಕನ್ನಡ ಪದಗಳನ್ನೇ ಬಳಸಿ ಮಾತನಾಡುವ ಸ್ಪರ್ಧೆಯನ್ನು ಅಯೋಜಿಸುವಂತೆ, ಯಾವುದಾದರೊಂದು ವಿಷಯದ ಕುರಿತು ಹೀಗೆ ಮಾತನಾಡಿದ ಸ್ಪರ್ಧಿಗಳಿಗೆ ಜಿಲ್ಲಾವಾರು ಮತ್ತು ರಾಜ್ಯ ಮಟ್ಟದಲ್ಲಿ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಎಸ್. ಮಹೇಶ್ ಮಾತನಾಡಿ, ಜಿಲ್ಲೆಯ 5 ತಾಲೂಕಿನ ವ್ಯಾಪ್ತಿಯಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜಿಸುವಂತೆ, ಸಮೂಹ ಗಾಯನವನ್ನು ಕೆಲವು ಶಾಲಾ ಕಾಲೇಜುಗಳಲ್ಲಿ ಮಾತ್ರ ಆಯೋಜಿಸದೆ ವಿವಿಧ ಸಂಘ ಸಂಸ್ಥೆಗಳ ಹಾಗೂ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸುವಂತೆ ಸಲಹೆ ಮಾಡಿದರು.
ಸಮಿತಿಯ ಮತೋರ್ವ ಸದಸ್ಯೆ ರಂಜಿತಾ ಕಾರ್ಯಪ್ಪ ಮಾತನಾಡಿ, ಗಡಿ ಗ್ರಾಮದಲ್ಲಿ ಕನ್ನಡ ಜಾಗೃತಿಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕೆಂದು ತಿಳಿಸಿದರು.
ಸಮಿತಿ ಸದಸ್ಯರಾದ ರಾಜು ಹಾಗೂ ಭಾರತಿ ರಮೇಶ್ ಮಾತನಾಡಿ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಹೊಸ ತಾಲೂಕು ಕೇಂದ್ರ ಕುಶಾಲನಗರದಲ್ಲೂ ಸಾರ್ವಜನಿಕ ಸ್ಥಳದಲ್ಲಿ ಸಮೂಹ ಗಾಯನ ಆಯೋಜಿಸುವ ಮೂಲಕ ಕನ್ನಡ ಮನಸ್ಸುಗಳನ್ನ ಜಾಗೃತಗೊಳಿಸಬೇಕೆಂದರು.
ಚರವಾಣಿಯ ಮೂಲಕ ನಡೆಸುವ ಸ್ಪರ್ಧೆಗೆ ನಿಬಂಧನೆಗಳನ್ನು ವಿಧಿಸಿ ಒಂದೊಂದು ತಾಲೂಕಿನ ಸ್ಪರ್ಧಿಗಳು ತಮ್ಮ ದೃಶ್ಯ ಮುದ್ರಿಕೆಗಳನ್ನು ಕಳುಹಿಸಲು ಒಬ್ಬೊಬ್ಬರ ಚರವಾಣಿ ಸಂಖ್ಯೆಯನ್ನು ನೀಡುವಂತೆ ಕಾಜೂರ್ ಸತೀಶ್ ತಿಳಿಸಿದರು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss