ಹೊಸದಿಗಂತ ವರದಿ, ಬಾಗಲಕೋಟೆ:
ಜಿಲ್ಲೆಯಲ್ಲಿ ಟೆಕ್ಸಟೈಲ್ ಪಾರ್ಕ್ ನಿರ್ಮಾಣ ಅವಶ್ಯಕತೆ ಇದ್ದು, ಪಾರ್ಕ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರೀಯಾ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಕ್ರಮಕೈಗೊಳ್ಳುವಂತೆ ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ನೂತನ ಜಿ.ಪಂ ಸಭಾಭವನದಲ್ಲಿ ಜರುಗಿದ ಮೂರನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಇಲಕಲ್ಲ ಸೀರೆ, ಗುಳೇದಗುಡ್ಡದ ಕಣಕ್ಕೆ ಹೆಸರುವಾಸಿಯಾಗಿದ್ದು, ಟೆಕ್ಸ್ಟೈನ್ ಪಾರ್ಕ ನಿರ್ಮಿಸಿದರೆ ನೇಕಾರರಿಗೆ ಅನುಕೂಲವಾಗಲಿದೆ. ಆದ್ದರಿಂದ ಪಾರ್ಕ ನಿರ್ಮಾಣಕ್ಕೆ ಪ್ರಸ್ತಾವನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಟೆಕ್ಸ್ ಟೈಲ್ ಪಾರ್ಕ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ 40 ಕೋಟಿ ರೂ.ಗಳ ಅನುದಾನ ನೀಡಾಗುತ್ತಿದೆ. ಬೇರೆ ಬೇರೆ ಕಡೆ ನಿರ್ಮಿಸಲಾದ ಜವಳಿ ಪಾರ್ಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಸೂಕ್ತವಾದ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಕಳುಹಿಸಲು ಕ್ರಮ ವಹಿಸಲು ತಿಳಿಸಿದರು. ಮೀನು ಕೃಷಿಗೆ ಅಭಿವೃದ್ದಿಗೆ ಅಧಿಕಾರಿಗಳು ಮುಂದಾಗಬೇಕು. ಮೀನು ಕೃಷಿ ಕೈಗೊಳ್ಳಲು ಪ್ರೋತ್ಸಾಹ ನೀಡಿ ಹೆಚ್ಚು ಹೆಚ್ಚು ಲೈಸೆನ್ಸ್ ನೀಡಲು ತಿಳಿಸಿದರು. ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನಿನ ಮರಿಗಳನ್ನು ಬಿಡಲು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ತಲುಪಲು ಕ್ರಮವಹಿಸಬೇಕು. ಮುಳುಗಡೆ ಪ್ರದೇಶದಲ್ಲಿ ನರೇಗಾದಡಿ ಗಿಡ ಹಚ್ಚಲು ಅರಣ್ಯ ಇಲಾಖೆಯ ಕ್ರಮವಹಿಸಬೇಕು. ಜಲಜೀವನ ಮಿಷನ್ ಯೋಜನೆಯಡಿ ಸಾಕಷ್ಟು ಅನುದಾನವಿದ್ದು, ಪ್ರತಿಯೊಂದು ಮನೆಗಳಿಗೆ ನಲ್ಲಿ ಕಲೆಕ್ಷನ್ ಕೊಡಿ. ಬರುವ ಬೇಸಿಗೆಯಲ್ಲಿ ಅನುಕೂಲವಾಗಲಿದೆ ಎಂದರು. ಜಿಲ್ಲೆಯಲ್ಲಿ ಯಾವುದೇ ಮನೆಗೆ ವಿದ್ಯುತ್ ಸಂಪರ್ಕ ಹೊಂದಿಲ್ಲವೆಂಬ ಕೂಗು ಕೇಳಬಾರದು. ಈ ನಿಟ್ಟಿನಲ್ಲಿ ಹೆಸ್ಕಾಂ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿರುವ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉದ್ಯೋಗ ಮೇಳವನ್ನು ಸಹ ಆಯೋಜಿಸಲು ತಿಳಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ನಾಮನಿರ್ದೇಶಿತ ಸದಸ್ಯರು, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.