ಹೊಸದಿಗಂತ ಆನ್ ಲೈನ್ ಡೆಸ್ಕ್:
ವೈದ್ಯಕೀಯ ಶಿಕ್ಷಣದಲ್ಲಿನ ಸೀಟ್ ಬ್ಲಾಕಿಂಗ್ ದಂಧೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸಲು ಮುಂದಿನ ವರ್ಷದಿಂದ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ ನೀಡಿದರು.
ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದ್ದು, ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾಲೇಜು ಆಡಳಿತ ಮಂಡಳಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಶುಲ್ಕ ಕಟ್ಟಿಸಿ ಪ್ರವೇಶ ಪರೀಕ್ಷೆ ಬರೆಸುತ್ತಿದೆ. ಅವರು ಆಯ್ಕೆ ಆದ ಬಳಿಕ ಅವರಿಗೆ ಅಲ್ಪಸ್ವಲ್ಪ ಹಣ ಕೊಟ್ಟು ಸೀಟು ಬಿಟ್ಟು ಹೋಗುವಂತೆ ಮಾಡುತ್ತಾರೆ. ಈ ರೀತಿ ತೆರವಾದ ಸೀಟುಗಳನ್ನು ಮ್ಯಾನೆಜ್ಮೆಂಟ್ ಕೋಟಾದಡಿ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿ ವರ್ಷ 250ರಿಂದ 400 ಸೀಟುಗಳು ಬ್ಲಾಕಿಂಗ್ಗೆ ಸಿಲುಕುತಿವೆ. ಅವ್ಯವಹಾರ ಮಾಡುವ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೊದಲು ನೊಟೀಸ್ ಕೊಡಿ ಆ ಮೇಲೆ ಅವರ ಮಾನ್ಯತೆಯನ್ನು ರದ್ದು ಮಾಡಿ ಎಂದು ಸದಸ್ಯರು ಆಗ್ರಹಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, ಕಾನೂನಿನಲ್ಲಿರುವ ಲೋಪದೋಷಗಳನ್ನು ಬಳಸಿಕೊಂಡು ಸೀಟ್ ಬ್ಲಾಕಿಂಗ್ ವ್ಯವಹಾರ ನಡೆಯುತ್ತಿದೆ. ರಾಜ್ಯದಲ್ಲಿರುವ 65 ಮೆಡಿಕಲ್ ಕಾಲೇಜುಗಳ ಪೈಕಿ 45 ಕಾಲೇಜು ಒಡೆತನಕ್ಕೆ ಸೇರಿವೆ. ಸುಪ್ರೀಂಕೋರ್ಟ್ನ ಆದೇಶವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಸೀಟ್ ಬ್ಲಾಕಿಂಗ್ ದಂಧೆಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಐದು ಮಂದಿಯ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದೆ. ಅದು ಸರ್ಕಾರದ ಪರಿಶೀಲನಾ ಹಂತದಲ್ಲಿದೆ. ಮುಂದಿನ ವರ್ಷದಿಂದ ಈ ವ್ಯವಹಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ವರೆಗೂ ಸೀಟ್ ಬ್ಲಾಕಿಂಗ್ ಸಂಬಂಧಪಟ್ಟಂತೆ ಯಾವುದೇ ಕಾಲೇಜಿಗೆ ನೊಟೀಸ್ ನೀಡಿಲ್ಲ. ಮಾನ್ಯತೆ ಕೂಡ ರದ್ದು ಮಾಡಲಾಗಿಲ್ಲ. ಯಾವುದೇ ಕಾಲೇಜು ವಿರುದ್ಧ ದೂರು ದಾಖಲಾಗಿಲ್ಲ. ಆದರೆ, ಈ ದಂಧೆಯ ಬಗ್ಗೆ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಎಸಿಬಿ ಸರ್ಕಾರದ ಪೂನಾರ್ವನುಮತಿ ಕೇಳಿದೆ ಎಂದು ವಿವರಿಸಿದರು.