spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇವರೇ ಹಾಕಿಯ ಆ ಹದಿನಾರು ಕಂಚುವೀರರು!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಹಾಕಿಯಲ್ಲಿ ಭಾರತ ಗೆದ್ದಿರುವ ಕಂಚು ಕೇವಲ ಪದಕಪಟ್ಟಿಯ ಲೆಕ್ಕವಲ್ಲ. ಒಂದೊಮ್ಮೆ ವಿಶ್ವದಂಗಳದಲ್ಲಿ ತಾನೇ ತಾನಾಗಿ ಮೆರೆದಿದ್ದ ಭಾರತೀಯ ಹಾಕಿಯ ವೈಭವದ ದಿನಗಳ ಪುನರುಜ್ಜೀವನದ ಮುನ್ನುಡಿ ಇದು. ಇದರ ಹಿಂದೆ ಒಂದು ಕ್ರೀಡಾ ವ್ಯವಸ್ಥೆ, ತರಬೇತುದಾರರು, ಪೌಷ್ಟಿಕ ಆಹಾರ ಪರಿಣತರು ಎಲ್ಲರೂ ಇದ್ದಾರಾದರೂ, ಕೊನೆಪಕ್ಷ ನಾವು ಕಂಚು ಗೆದ್ದ ತಂಡದಲ್ಲಿರುವ ಆಟಗಾರರನ್ನಾದರೂ ಈ ಹೊತ್ತಿನಲ್ಲಿ ಅರಿಯಬೇಕು, ನೆನೆಯಬೇಕು. ಹೆಚ್ಚುವರಿ ಆಟಗಾರರೂ ಸೇರಿದಂತೆ ಆ ಹದಿನಾರು ಆಟಗಾರರ ಚುಟುಕು ಪರಿಚಯ ಇಲ್ಲಿದೆ.

ಮನ್ಪ್ರೀತ್ ಸಿಂಗ್: ತಂಡದ ನಾಯಕ. ನಾಯಕತ್ವ ಪ್ರಾರಂಭದಿಂದಲೇ ಬೆಳೆದುಬಂದಿದೆ. ‘ಜೂನಿಯರ್ ವಿಶ್ವಕಪ್‌’ನಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ ಮನ್ಪ್ರೀತ್ ಸಿಂಗ್ ಟೋಕಿಯೋ ಒಲಿಂಪಿಕ್ಸ್ ನ ಹಾಕಿ ಗೆಲುವಿನಲ್ಲಿ ದೊಡ್ಡ ಪಾತ್ರವಿದೆ. 29ನೇ ವರ್ಷದ ಮನ್ಪ್ರೀತ್ 2020ರಲ್ಲಿ ವರ್ಷದ ‘ಎಫ್‌ಐಎಚ್’ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾದ ಮೊದಲ ಭಾರತೀಯ. ಇವರು ತಮ್ಮ 19ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದ್ದು, ವಿಶ್ವದ ಅತ್ಯುತ್ತಮ ಪ್ಲೇಮೇಕರ್ ಎಂಬ ಕೀರ್ತಿ ಪಡೆದಿದ್ದಾರೆ. ಇವರು ಮೂರು ಸಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.

ಪಿ ಆರ್ ಶ್ರೀಜೇಶ್: ಈ ಬಾರಿ ಭಾರತದ ಒಲಿಂಪಿಕ್ಸ್ ವಿಕ್ರಮದಲ್ಲಿ ಇವರ ಶ್ರೇಯ ದೊಡ್ಡದು. ಎದುರಾಳಿ ತಂಡಗಳು ಪೆನಾಲ್ಟಿ ಅವಕಾಶ ಗಳಿಸಿಕೊಂಡು ಮಾಡಲಿದ್ದ ಹಲವು ಗೋಲುಗಳನ್ನು ತಡೆದಿದ್ದಾರಿವರು. ಮೂವತ್ಮೂರು ವರ್ಷದ ಕೇರಳಿಗ ಶ್ರೀಜೇಶ್ ತಂಡದಲ್ಲಿ ಹಿರಿಯರು, ಉಳಿದ ಸದಸ್ಯರಿಗೆ ಉತ್ತೇಜನ ತುಂಬುವುದರಲ್ಲೂ ಮುಂದು. 2006ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಪಾದಾರ್ಪಣೆ. 2011ರ ನಂತರ ಪ್ರಸಿದ್ಧಿಗೆ ಬಂದರು. 

 

ರೂಪೆಂದರ್ ಪಾಲ್ ಸಿಂಗ್: 2010ರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಅನುಭವಿ ಆಟಗಾರ. ಮೂವತ್ತು ವರ್ಷದ ಇವರು ಮೂಲತಃ ಪಂಜಾಬಿನವರು. ಟೋಕಿಯೋ ಒಲಂಪಿಕ್ಸ್ ಗೂ ಮುನ್ನ 2014ರ ಏಷಿಯನ್ ಗೇಮ್ಸ್, 2018ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗಿಯಾಗಿದ್ದರು.

ಸುರೇಂದರ್ ಕುಮಾರ್: ಭಾರತೀಯ ಹಾಕಿ ತಂಡದ ರಕ್ಷಣೆಯ ಆಧಾರ ಸ್ತಂಭವಾಗಿದ್ದಾರೆ ಸುರೇಂದರ್. 27 ವರ್ಷದ ಈ ತರುಣ ಏಷನ್ ಗೇಮ್ಸ್, ರಿಯೋ ಗೇಮ್ಸ್, ಹಾಕಿ ಇಂಡಿಯಾ ಲೀಗ್ ಗಳ ಮೂಲಕ ಗಮನ ಸೆಳೆದವರು ಈಗ ಹಾಕಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. 

ಹರ್ಮನ್ ಪ್ರೀತ್ ಸಿಂಗ್:  ಜೂನಿಯರ್ ಸೆಟ್ ಅಪ್ ತಂಡದಿಂದ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದವರು ಹರ್ಮನ್ ಪ್ರೀತ್ ಸಿಂಗ್.  2016ರ ಜೂನಿಯರ್ ವಿಶ್ವಕಪ್ ನಲ್ಲಿ ವಿಜಯಪತಾಕೆ ಹಾರಿಸಿದ ತಂಡದ ಆಟಗಾರರಲ್ಲಿ ಒಬ್ಬರು. ಟೋಕಿಯೋ ಒಲಂಪಿಕ್ಸ್ ಗೂ ಮುನ್ನ ರಿಯೋ ಒಲಂಪಿಕ್ಸ್ ನಲ್ಲೂ ಭಾಗಿಯಾಗಿದ್ದರು.    

ಬಿರೇಂದ್ರ ಲಾಕ್ರ: 200ಕ್ಕಿಂತಲೂ ಹೆಚ್ಚು ಅಂತಾರಾಷ್ಟ್ರೀಯ ಕ್ಯಾಪ್ (ಫೀಲ್ಡ್ ಹಾಕಿಯಲ್ಲಿ ನೀಡಲಾಗುವ ಪ್ರಶಸ್ತಿ/ಪಂದ್ಯಸಮ್ಮಾನ) ಗಳನ್ನು ಹೊಂದಿರುವ ಕೆಲವೇ ಆಟಗಾರರಲ್ಲಿ ಬಿರೇಂದ್ರ ಲಾಕ್ರಾ ಕೂಡ ಒಬ್ಬರು. ಮೊಣಕಾಲಿನ ಗಾಯದಿಂದಾಗಿ 2012ರ ರಿಯೋ ಒಲಂಪಿಕ್ಸ್ ನಿಂದ ಹಿಂದುಳಿದಿದ್ದ ಬಿರೇಂದ್ರ ಇದೀಗ ಟೋಕಿಯೋ ಒಲಂಪಿಕ್ಸ್ ನಲ್ಲಿ ಜಯಗಳಿಸಿದ್ದಾರೆ. 31 ವರ್ಷ ಒಡಿಶಾ ನಿವಾಸಿ ಬಿರೇಂದರ್ ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್, ವಿಶ್ವಕಪ್ ಸೇರಿದಂತೆ ಹಲವಾರು ಪಂದ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಆಡಿದ್ದಾರೆ.

ಅಮಿತ್ ರೋಹಿ ದಾಸ್: ಏಷ್ಯನ್ ವಿಶ್ವ ಕಪ್, ಜೂನಿಯರ್ ವಿಶ್ವ ಕಪ್ ಸೇರಿದಂತೆ ಬಹುತೇಕ ಪಂದ್ಯಗಳಲ್ಲಿ ಅಮಿತ್ ರೋಹಿ ಭಾಗಿಯಾಗಿದ್ದರು. 2013ರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದ ಬಳಿಕ ಇಂಡಿಯಾ ಲೀಗ್‌ನಲ್ಲಿ ಭಾಗಿಯಾಗಲು 3 ವರ್ಷ ಬೇಕಾಯಿತು. ಅಂದಿನಿಂದ ಇಂದಿನವರೆಗೂ ತಂಡದ ರಕ್ಷಣೆಯ ಸಾಧನೆಯನ್ನು ಸಾಬೀತುಪಡಿಸುತ್ತಿದ್ದಾರೆ.

ಲಲಿತ್ ಕುಮಾರ್ ಉಪಾಧ್ಯಾಯ್: ಮೊಹಮ್ಮದ್ ಶಾಹಿದ್‌ನಂಥ ಕ್ರೀಡಾಪಟುಗಳನ್ನು ಮಾದರಿಯಾಗಿಟ್ಟುಕೊಂಡು ಹಾಕಿಪ್ರೇಮ ಬೆಳೆಸಿಕೊಂಡ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ್. ಜೂನಿಯರ್ ಟೂರ್ನಮೆಂಟ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಾರಣಾಸಿಯ ಕ್ರೀಡಾಪಟು ಲಲಿತ್ ತಮ್ಮ ತಪ್ಪಿಲ್ಲದಿದ್ದರೂ ಕೆಲ ಸಮಯ ಕಾಂಟ್ರವರ್ಸಿ ಕಾರಣದಿಂದ ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ಟೀಂ ಇಂಡಿಯಾದ ಪ್ರಮುಖ ಅಟ್ಯಾಕಿಂಗ್ ಆಟಗಾರ. ಎದುರಾಳಿಗಳಿಗೆ ತಮ್ಮ ಕಾಲಿನ ಪೊಸಿಶನ್ಸ್‌ಗಳನ್ನು ಫೇಕ್ ಫಾಲ್ಸ್ ಮಾಡಿ ತೋರಿಸಿ ಚಾಕಚಕ್ಯತೆಯಿಂದ ಆಟ ಆಡುತ್ತಾರೆ. ಅಲ್ಲದೇ ಇಡೀ ಫೀಲ್ಡ್‌ನ ಮೇಲೆ ಕಣ್ಣಿಡುವುದರಲ್ಲಿಯೂ ಲಲಿತ್ ನಿಪುಣ.

ಮನ್‌ದೀಪ್ ಸಿಂಗ್: ಅಟ್ಯಾಕಿಂಗ್ ಪ್ಲೇಯರ್ ಮನ್‌ದೀಪ್ ಸಿಂಗ್ ಆಟದ ವೈಖರಿ ವಿಭಿನ್ನವಾಗಿದೆ. ಟೋಕಿಯೊ ಒಲಂಪಿಕ್ಸ್‌ನ ಪಂದ್ಯದಲ್ಲಿ ಮನ್‌ದೀಪ್ ಸಿಂಗ್ ಅಟ್ಯಾಕ್ ಪ್ಯಾಕ್‌ನ ನಾಯಕರಾಗಿದ್ದಾರೆ. 2012 ರಲ್ಲಿ ಮೊದಲ ಬಾರಿಗೆ ಜೂನಿಯರ್ ಏಷ್ಯಾ ಕಪ್‌ನಲ್ಲಿ ಮನ್‌ಪ್ರೀತ್ ಭಾಗವಹಿಸಿದ್ದರು. ಶೀಘ್ರವೇ ಸೀನಿಯರ್ ಪ್ಲೇಯರ್ ಆಗಿ 2013ರ ಅಂತಾರಾಷ್ಟ್ರೀಯ ಹಾಕಿ ವಲ್ಡ್ ಲೀಗ್‌ನ ಪಂದ್ಯದಲ್ಲಿ ಮನ್‌ದೀಪ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆಗಿನಿಂದ ಈಗಿನವರೆಗೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. 

ಗುರ್ಜಾಂತ್ ಸಿಂಗ್: 2016 ರ ಜೂನಿಯರ್ ವಲ್ಡ್‌ಕಪ್‌ನ ಸೆಮಿಫೈನಲ್ಸ್‌ನಲ್ಲಿ ಸಿಕ್ಕಾಪಟ್ಟೆ ಗೋಲ್ಸ್ ಮಾಡಿ ರಾತ್ರೋ ರಾತ್ರಿ ಫೇಮಸ್ ಆದ ಕ್ರೀಡಾತಾರೆ ಗುರ್ಜಾಂತ್ ಸಿಂಗ್. ಜ್ಯೂನಿಯರ್‌ನಿಂದ ಸೀನಿಯರ್ ಆಗುವುದಕ್ಕೆ ಗುರ್ಜಾಂತ್‌ಗೆ ಹೆಚ್ಚೇನೂ ಸಮಯ ಬೇಕಾಗಿರಲಿಲ್ಲ. 2018ರ ಕಾಮನ್‌ವೆಲ್ತ್ ಗೇಮ್ಸ್‌ ನಂತರ ಗುರ್ಜಾಂತ್‌ಗೆ ಗಾಯಗಳ ಸಮಸ್ಯೆ ಕಾಡಿತ್ತು. ಕೆಲ ಪಂದ್ಯಗಳಲ್ಲಿ ಒಳಗಿದ್ದರೆ, ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಯ್ತು. ತದನಂತರ 2020ರ ಪ್ರೋ ಲೀಗ್‌ನಿಂದ ಮತ್ತೆ ನ್ಯಾಷನಲ್ ಟೀಂ ಸೇರಿದರು. ಈ ಪಂದ್ಯದಲ್ಲಿ 13 ಸೆಕೆಂಡುಗಳಲ್ಲಿ ಗೋಲ್ ಮಾಡಿದ ಅತಿ ವೇಗವಾದ ಭಾರತೀಯ ಹಾಕಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಗುರ್ಜಾಂತ್ ಪಾತ್ರರಾದರು.

ದಿಲ್‌ಪ್ರೀತ್ ಸಿಂಗ್: ಕಿರಿಯ ಆಟಗಾರ ದಿಲ್‌ಪ್ರೀತ್ ಸಿಂಗ್ ಕ್ರೀಡಾಸ್ಫೂರ್ತಿ ಎಷ್ಟೋ ಜನರಿಗೆ ಮಾದರಿ. 20 ವರ್ಷದ ದಿಲ್‌ಪ್ರೀತ್ 2018 ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ತಮ್ಮ ಚೊಚ್ಚಲ ಹಾಕಿ ಪಂದ್ಯ ಆಡಿದ್ದರು. ಮೊದಲ ಪಂದ್ಯದಲ್ಲೇ ದಿಲ್‌ಪ್ರೀತ್ ಆಟದ ವೈಖರಿಗೆ ಮನಸೋತ ಕೋಚ್‌ಗಳು ಒಂದೇ ವರ್ಷದಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಮನ್‌ಪ್ರೀತ್‌ಗೆ ಸ್ಥಾನ ನೀಡಿದರು. ಒಂದೇ ವರ್ಷದಲ್ಲಿ ಮನ್‌ಪ್ರೀತ್ ಕಾಮನ್‌ವೆಲ್ತ್ ಗೇಮ್ಸ್, ಏಶಿಯನ್ ಗೇಮ್ಸ್ ಹಾಗೂ ವಲ್ಡ್ ಕಪ್ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಈ ಯುವ ಸ್ಟ್ರೈಕರ್ ಭವಿಷ್ಯದಲ್ಲಿ ಅತ್ಯುತ್ತಮ ಆಟಗಾರನಾಗುತ್ತಾನೆ ಎನ್ನುವ ಭರವಸೆ ಎಲ್ಲರಲ್ಲೂ ಇದೆ. 

ಶಮ್‌ಶೇರ್ ಸಿಂಗ್: 2019 ರ ಒಲಂಪಿಕ್ ಟೆಸ್ಟ್ ಇವೆಂಟ್‌ನಲ್ಲಿ ಮೊದಲ ಬಾರಿಗೆ ಶಮ್‌ಶೇರ್ ತಮ್ಮ ಆಟ ಪ್ರದರ್ಶಿಸಿದರು. ಪಂಜಾಬ್‌ನ ಬಾರ್ಡರ್ ಟೌನ್ ಅಟ್ಟಾರಿಯಿಂದ ಬಂದ ಮೊದಲ ಒಲಂಪಿಯನ್ ಹಾಕಿ ಆಟಗಾರ ಶಮ್‌ಶೇರ್ ಆಗಿದ್ದಾರೆ. 24 ವರ್ಷದ ಶಮ್‌ಶೇರ್ 10 ಕ್ಕೂ ಕಡಿಮೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಫಾರ್ವಡ್ ಲೈನ್‌ನಲ್ಲಿ ಆಟ ಆಡುವ ಇವರನ್ನುಅಚ್ಚರಿ ಹುಟ್ಟಿಸಬಲ್ಲ ಟ್ರಂಪ್ ಕಾರ್ಡ್ ಎಂದೂ ಹೇಳಲಾಗುತ್ತಿದೆ.

ಹಾರ್ದಿಕ್ ಸಿಂಗ್: 22 ವರ್ಷದ ‘ಹಾರ್ದಿಕ್ ಸಿಂಗ್’ ಒಲಿಂಪಿಕ್ ಕ್ರೀಡಾಕೂಟದ  ಚೊಚ್ಚಲ ಆಟಗಾರ. ಇವರು 2018 ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಪಾದಾರ್ಪಣೆ ಮಾಡಿದ್ದು, ಅತಿ ಕಡಿಮೆ ಅವಧಿಯಲ್ಲಿ ತಂಡದ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಇವರು 2016ರ ಹರೇಂದ್ರ ಸಿಂಗ್ ನೇತೃತ್ವದ ಜೂನಿಯರ್ ವಿಶ್ವಕಪ್‌ ನಲ್ಲಿ ಭಾಗವಹಿಸಿದ್ದರು. ಇವರು ಮೂಲತಃ  ಲಂಕಿ ಮಿಡ್‌ಫೀಲ್ಡರ್ ಹಾಕಿ ಕುಟುಂಬದಿಂದ ಬಂದವರು. ಮಾಜಿ ಮಹಿಳಾ ಕ್ಯಾಪ್ಟನ್ ರಾಜ್‌ಬೀರ್ ರಾಯ್ ಮತ್ತು ಸ್ಟಾರ್ ಜುಗ್ರಾಜ್ ಸಿಂಗ್‌ ಸಂಬಂಧಿ. ಹಾರ್ದಿಕ್ ಕೂಡ ವಂಶದ ಘನತೆ ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೀಲಕಂಠ ಶರ್ಮಾ: 2016 ರ ಜೂನಿಯರ್ ವಿಶ್ವಕಪ್‌ನ ಬ್ಯಾಚ್‌ನಿಂದ ಎರಡೇ ವರ್ಷಕ್ಕೆ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡಿ ಜಯ ಗಳಿಸಿದ ಕೀರ್ತಿ ‘ನೀಲಕಂಠ ಶರ್ಮಾ’ ಅವರದು. ವಿಶ್ವಕಪ್ ಮತ್ತು ಈಗೀನ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಪ್ರಮುಖ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. 26 ವರ್ಷ ವಯಸ್ಸಿನ ಇವರು  ಮಿಡ್‌ಫೀಲ್ಡರ್ ಆಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

 

ಸುಮಿತ್ ವಾಲ್ಮೀಕಿ: ಸೋನೆಪತ್‌ನ ಕುರಾದ್ ಹಳ್ಳಿಯ 24 ವರ್ಷದ ‘ಸುಮಿತ್ ವಾಲ್ಮೀಕಿ’ ಅವರು 2017 ರಲ್ಲಿ ‘ಸುಲ್ತಾನ್ ಅಜ್ಲಾನ್ ಶಾ ಕಪ್‌’ನಲ್ಲಿ ಭಾಗಿಯಾಗಿದ್ದರು. ಹಾಗೆಯೇ 2016 ರ ಜೂನಿಯರ್ ವಿಶ್ವಕಪ್ ವಿಜೇತ ತಂಡದಲ್ಲಿ ಭಾಗಿಯಾದರು. ಮೂಲ ಸೌಕರ್ಯ ಒದಗಿಸಿಕೊಳ್ಳಲಾಗದಷ್ಟು ಬಡತನದ ನಡುವೆಯೂ ಇವರ ಈ ಸಾಧನೆಗೆ ಚಪ್ಪಾಳೆ ತಟ್ಟಲೇಬೇಕು.

ವಿವೇಕ್ ಸಾಗರ್ ಪ್ರಸಾದ್: ಅತ್ಯಂತ ಪ್ರತಿಭಾವಂತ ಮಿಡ್‌ಫೀಲ್ಡರ್ ವಿವೇಕ್ ಸಾಗರ್. ಬುದ್ಧಿವಂತಿಕೆ ಮತ್ತು ಆಟದ ವೇಗವೇ  ಅವರ ದೊಡ್ಡ ಶಕ್ತಿ. 2018 ರಲ್ಲಿ ತಮ್ಮ 17 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಪಾದಾರ್ಪಣೆ ಮಾಡಿದ ಎರಡನೇ ಕಿರಿಯ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2020 ರಲ್ಲಿ ‘ರೈಸಿಂಗ್ ಸ್ಟಾರ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss