Wednesday, July 6, 2022

Latest Posts

ಎಂಇಎಸ್, ಶಿವಸೇನೆ ಸಂಘಟನೆ ‌ನಿಷೇಧಿಸುವಂತೆ ಕರವೇ ಪ್ರತಿಭಟನೆ

ಹೊಸದಿಗಂತ ವರದಿ,ಬಳ್ಳಾರಿ:

ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಕನ್ನಡ ಧ್ವಜಕ್ಕೆ ಅಪಮಾನ‌ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಕರವೇ (ನಾರಾಯಣಗೌಡ) ಜಿಲ್ಲಾ ಸಮೀತಿ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕರವೇ ಜಿಲ್ಲಾ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ನಾನಾ ಕಡೆ ಸಂಚರಿಸಿ, ಜಿಲ್ಲಾಧಿಕಾರಿ ‌ಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು. ಇದಕ್ಕೂ ಮುನ್ನ ನಗರದ ರಾಯಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಾನಾ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಸೇರಿದಂತೆ ಸುಮಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಕಚೇರಿ ಮುಖ್ಯದ್ವಾರದ ಎದುರು ಸಂಘಟನೆ ಅಧ್ಯಕ್ಷ ಚಾನಾಳ್ ಶೇಖರ್ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಕೂಡಲೇ ನಿಷೇಧಿಸಿ: ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡಿಗರ ಮೇಲೆ ದೌರ್ಜನ್ಯ, ಕನ್ನಡಿಗರು, ನಾಡಧ್ವಜಕ್ಕೆ ಅಪಮಾನ ಮಾಡಿ, ಪದೇ ಪದೇ ಕನ್ನಡಗಿರನ್ನು ಕೆಣಕುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು‌ ನಿಷೇಧಿಸಬೇಕು, ಇತ್ತೀಚೆಗೆ ‌ನಾಡಧ್ವಜಕ್ಕೆ ಅಪಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು, ನಿರ್ಲಕ್ಷಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಭಾಷಾವಾರು ಪ್ರಾಂತ್ಯ ವಿಂಗಡಣೆಯ ಬಳಿಕ,ಮಹಾರಾಷ್ಟ್ರ ರಾಜಕಾರಣಿಗಳು ಹಾಗೂ ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಮೇಲಿಂದ ಮೇಲೆ ಅಶಾಂತಿಯನ್ನು ಉಂಟು‌ಮಾಡುವ ಕೆಲಸಗಳು ನಡೆಯುತ್ತಿವೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಅದಕ್ಕೆ ಮಹಾರಾಷ್ಟ್ರ ದಿಂದ ಹಣಕಾಸಿನ ನೆರವು ಪಡೆದು,ಬೆಳಗಾವಿಯಲ್ಲಿನ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟುವ ಮೂಲಕ ಸುಮಾರು ವರ್ಷಗಳಿಂದ ಅಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ. ಎಂಇಎಸ್ ಜೊತೆಗೆ ಶಿವಸೇನೆ ಪಕ್ಷದ ಘಟಕವನ್ನು ಅಲ್ಲಿ ಸ್ಥಾಪಿಸಲಾಗಿದೆ. ಈ ಎರಡೂ ಸಂಘಟನೆಗಳು ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆ ಸದಸ್ಯರು, ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಾ ಬರಲಾಗಿದೆ. ಇದು ತೀರಾ ಖಂಡನೀಯ, ಶಾಂತಿ, ನೆಮ್ಮದಿಗೆ ಹೆಸರಾದ ನಮ್ಮನ್ನು ಎಂಇಎಸ್, ಶಿವಸೇನೆ ಸಂಘಟನೆಗಳು ಅಶಾಂತಿ ವಾತಾವರಣವನ್ನು ನಿರ್ಮಿಸಿ ನಮ್ಮ ಸ್ವಾಭಿಮಾನಿ ಕನ್ನಡಿಗರ ನಿದ್ರೆಗೆಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಸಂಘಟನೆಗಳನ್ನು ರಾಜ್ಯದಲ್ಲೇ ನಿಷೇಧಿಸಬೇಕು, ಶಾಂತಿ ವಾತಾವರಣ ನಿರ್ಮಿಸಬೇಕು, ನಿರ್ಲಕ್ಷಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಅಂಗಡಿ ಶಂಕರ್, ಶಿವಕುಮಾರ್, ತಿಪ್ಪಾರೆಡ್ಡಿ, ಶಶಿಕುಮಾರ್, ಬೆಟ್ಟಪ್ಪ, ಶಬರಿ‌ ರವಿ, ತೋಟದ್ ವೀರೇಶ್, ಹನುಮಂತ ರೆಡ್ಡಿ, ಸಿಂಧಿಗೇರಿ ಗೋವಿಂದ, ಎಸ್.ಚಂದ್ರಶೇಖರ್, ಮೋಕಾ‌ ಪಂಪನಗೌಡ, ಚಾಂದ್ ಭಾಷಾ, ಬೆಳಗಲ್ ವಿರುಪಾಕ್ಷಗೌಡ, ಕುಡುತಿನಿ ಶಿವಕುಮಾರ್, ರಾಮಕೃಷ್ಣ, ಮಲ್ಲಿಕಾರ್ಜುನ್ ಕಂಪ್ಲಿ ಸೇರಿದಂತೆ ನೂರಾರು ಪದಾಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss