73ನೇ ಗಣರಾಜ್ಯೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ದೇಶದ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನೇಕ ಮಹತ್ವಪೂರ್ಣ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತಿದೆ. ಭಾರತ ಸರಕಾರವು ತಂತ್ರಜ್ಞಾನದಲ್ಲಿನ ಅತ್ಯುತ್ತಮ ಸಾಧನೆಗಾಗಿ ರಾಜ್ಯಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿದೆ ಎಂದು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ತಿಳಿಸಿದರು.

ಅವರು ಮಾಣಿಕ್ ಶಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ, ಅಮೃತ ಗ್ರಾಮಪಂಚಾಯತ್‌ಗಳ ಅಮೃತ ರೈತ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ ಶಾಲಾ ಮೂಲಸೌಕರ್ಯ ಕಾರ್ಯಕ್ರಮ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಸ್ತ್ರೀಯರ ಮತ್ತು ಬಾಣಂತಿಯರ ಬ್ಯಾಂಕ್ ಖಾತೆಗಳಿಗೆ ₹ 5000 ಜಮೆ ಮಾಡಲಾಗುವುದು, ಇದರಿಂದ ಪ್ರಸ್ತುತ ರಾಜ್ಯದಲ್ಲಿ 2.9 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ ಆಗಲಿದೆ ಎಂದರು.

ಸಾಂಕ್ರಾಮಿಕ ರೋಗದ ಈ ಪರಿಸ್ಥಿತಿಯಲ್ಲಿ ಅವಿರತವಾಗಿ ಶ್ರಮಿಸಿದ ನಮ್ಮ ವೈದ್ಯರಿಗೆ, ನರ್ಸ್‌ಗಳಿಗೆ, ಪೊಲೀಸ್ ಸಿಬ್ಬಂದಿಗೆ ಹಾಗೂ ಎಲ್ಲಾ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಕೋವಿಡ್ ವಾರ್ ರೂಮ್ ಮೂಲಕ ಇದನ್ನು ಸಾಧಿಸುವ ದಿಸೆಯಲ್ಲಿ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿರುವುದಕ್ಕಾಗಿ ನಾನು ಸರಕಾರಕ್ಕೆ ಅಭಿನಂದಿಸುತ್ತೇನೆ. ಕೋವಿಡ್ ವಾರ್ ರೂಂ ನಿರ್ವಹಣೆ, ಸೋಂಕಿತರ ಗುರುತಿಸುವಿಕೆ ಮತ್ತು ಕ್ವಾರಂಟೈನ್ ನಿಗಾವಣೆ ಮೊದಲಾದ ವಿವಿಧ ಕ್ಷೇತ್ರಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ. ಇದರಿಂದಾಗಿ ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ ಎಂದು ಶ್ಲಾಘಿಸಿದರು.

2021-22ರಲ್ಲಿ ಜಗತ್ತು ಸವಾಲನ್ನು ನಿಭಾಯಿಸಲು ಹೆಣಗುತ್ತಿರುವಾಗ ನಾವು ಕೋವಿಡ್-19ರ ವಿರುದ್ಧ ಅತ್ಯಂತ ಸಮರ್ಥವಾಗಿ ಹೋರಾಡಿದ್ದೇವೆ. ನಾವು ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ 2022ಕ್ಕೆ ಹೆಜ್ಜೆ ಇರಿಸಿದ್ದೇವೆ. ಈ ಬಿಕ್ಕಟ್ಟನ್ನು ನಮ್ಮ ಸಾಮರ್ಥ್ಯ ವೃದ್ಧಿಸುವ ಮತ್ತು ಹೆಚ್ಚುವರಿ ಆರೋಗ್ಯ ಮೂಲ ಸೌಕರ್ಯವನ್ನು ಸೃಜಿಸುವ ಹಾಗೂ ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ವೆಂಟಿಲೆಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ಅವಕಾಶವನ್ನಾಗಿ ನಾವು ಬಳಸಿಕೊಂಡಿದ್ದೇವೆ ಎಂದು ರಾಜ್ಯಪಾಲರು ಹೇಳಿದರು.

ನಗರೋತ್ಥಾನ ಇತ್ಯಾದಿಗಳನ್ನು ಒಳಗೊಂಡಂತೆ 14 ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ರಾಜ್ಯವು ಘೋಷಿಸಿದೆ. ಕರ್ನಾಟಕವು 2023ರ 15 ಆಗಸ್ಟ್‌ವರೆಗೆ ಗುರಿ ನಿಗದಿಪಡಿಸಿದ ಲಿತಾಂಶಗಳೊಂದಿಗೆ ಅನುಷ್ಠಾನ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ರಾಜ್ಯಪಾಲರು, ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿಪತ್ತಿನ ಸವಾಲನ್ನು ಸಮರ್ಥವಾಗಿ ಎದುರಿಸಿ, ನಿಯಂತ್ರಿಸಲು ಶ್ರಮಿಸಿದ ನಮ್ಮ ಕ್ಷೇತ್ರ ಸಿಬ್ಬಂದಿ, ವಿಕೋಪ ನಿರ್ವಹಣಾ ತಂಡಗಳು ಮತ್ತು ಜಿಲ್ಲಾಧಿಕಾರಿಗಳಿಗೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ₹ 4.41 ಕೋಟಿ:
ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆಯನ್ನು ಗ್ರಾಮ ಮಟ್ಟದ ಸ್ಥಳೀಯ ಯುವಕರ ಮೂಲಕ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. 2021-22ನೇ ಸಾಲಿನಲ್ಲಿ 12,76,868 ರೈತರು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಂಡಿದ್ದಾರೆ ಮತ್ತು 256.95 ಲಕ್ಷ ಪ್ರದೇಶವನ್ನು ಬೆಳೆ ಸಮೀಕ್ಷೆಯ ಅಡಿ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ₹ 4.41 ಕೋಟಿ ಮೊತ್ತವನ್ನು 16176 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ವಿವರಿಸಿದರು.

ಸ್ವಾತಂತ್ರ್ಯ ಅಮೃತೋತ್ಸವಕ್ಕೆ 75ವಾರಗಳ ಕೌಂಟ್‌ಡೌನ್:
ಸ್ವಾತಂತ್ರ್ಯದ ಅಮೃತ ಮಹೋತ್ಸವವು, 75 ವರ್ಷಗಳ ಪ್ರಗತಿಪರ ಭಾರತ ಮತ್ತು ದೇಶದ ಜನರ, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರಕಾರದ ಉಪಕ್ರಮವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಧಿಕೃತ ಪ್ರಯಾಣವು ಕಳೆದ ವರ್ಷ ಮಾರ್ಚ್ 12ರಂದು ಆರಂಭವಾಗಿದೆ. 75ನೇ ವಾರ್ಷಿಕೋತ್ಸವದ 75 ವಾರಗಳ ಕೌಂಟ್‌ಡೌನ್ ಪ್ರಾರಂಭವಾಗಿ 2023ರ ಆಗಸ್ಟ್ 15ರಂದು ಅದು ಕೊನೆಗೊಳ್ಳುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.

ಬೆಂಗಳೂರು ಮೆಟ್ರೋ 42.3 ಕಿ.ಮೀ. ಮಾರ್ಗದಲ್ಲಿ 40 ನಿಲ್ದಾಣಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತಿದೆ. ಶೇ. 62ರಷ್ಟು ಆರ್ಥಿಕ ಮತ್ತು ಶೇ. 60ರಷ್ಟು ಭೌತಿಕ ಅಭಿವೃದ್ಧಿ ಸಾಧನೆಯಾಗಿದೆ. ಜೊತೆಗೆ 6.12 ಕಿ.ಮೀ. ಉದ್ದದ ಯಲಚೇನಹಳ್ಳಿಯಿಂದ ಸಿಲ್ಕ್‌ಬೋರ್ಡ್‌ವರೆಗಿನ ಮಾರ್ಗ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53 ಕಿ.ಮೀ ಉದ್ದದ ಮಾರ್ಗವನ್ನೂ ಮುಕ್ತಗೊಳಿಸಲಾಗಿದೆ ಎಂದು ರಾಜ್ಯಪಾಲ ಗೆಹ್ಲೋಟ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!