Thursday, June 30, 2022

Latest Posts

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಕೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಂಗಳವಾರ ನೂರಾರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರಾಣೇಶ್ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಅವರೊಂದಿಗೆ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಇದ್ದರು.
ನೂರಾರು ಗ್ರಾ.ಪಂ.ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರುಗಳು ಹಾಗೂ ಇನ್ನಿತರೆ ಸ್ಥಳೀಯ ಸಂಸ್ಥೆ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರಾಣೇಶ್ ಹಾಗೂ ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗಿದರು.
ನಾಮಪತ್ರ ಸಲ್ಲಿಸಿದ ನಂತರ ಎಂ.ಕೆ.ಪ್ರಾಣೇಶ್ ಮಾತನಾಡಿ, ಎಲ್ಲಾ ಸ್ಥಳೀಯ ಸಂಸ್ಥೆಯ ಸದಸ್ಯರು ಈ ಬಾರಿ ತಮ್ಮನ್ನು ಮರು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಕಳೆದ ೬ ವರ್ಷ ಪರಿಷತ್ ಸದಸ್ಯನಾಗಿದ್ದ ಸಂದರ್ಭದಲ್ಲಿ ಎಲ್ಲಾ ಗ್ರಾ.ಪಂ.ಗಳಿಗೂ ಪಕ್ಷಾತೀತವಾಗಿ ನಡೆದುಕೊಂಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಿದ್ದೇನೆ ಎಂದರು.
ಜಿಲ್ಲೆಯ ೧೯೬ ಗ್ರಾ.ಪಂ.ಗಳಿಗೂ ನಮ್ಮ ಅವಧಿಯಲ್ಲಿ ಜನರೇಟರ್‌ಗಳನ್ನು ಪೂರೈಕೆ ಮಾಡಲಾಗಿದೆ. ಆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಬೇಧ ಭಾವ ಮಾಡಿಲ್ಲ. ಸಾಮಾನ್ಯ ಜನರಿಗೆ ಕೆಲಸಗಳಾಗಬೇಕು. ಅದರಲ್ಲಿ ರಾಜಕಾರಣ ಇರಬಾರದು ಎನ್ನುವ ಮೂಲ ಉದ್ದೇಶ ನಮ್ಮದಾಗಿತ್ತು ಎಂದರು.
ಗ್ರಾ.ಪಂ.ಸದಸ್ಯರು ಆರ್ಥಿಕವಾಗಿ ಬಲಾಡ್ಯರು, ಸಮಸ್ಯೆಯಲ್ಲಿರುವವರೂ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರಿಗೆ ಗೌರವಧನವನ್ನು ಹೆಚ್ಚಿಸಲೇ ಬೇಕೆಂದು ಪರಿಷತ್ತಿನಲ್ಲಿ ಹೋರಾಟವನ್ನೂ ನಡೆಸಿದ್ದೆ. ಅದರ ಪರಿಣಾಮ ೫೦೦ ರೂ. ಇದ್ದ ಗೌರವಧವನ್ನು 1000 ರೂ.ಗೆ ಅಂದಿನ ಸಿಎಂ ಯಡಿಯೂರಪ್ಪ ಅವರು ಏರಿಸಿದ್ದರು. ಗೌರವಧನ ನೀಡಿದ್ದೇ ಬಿಜೆಪಿ ಸರ್ಕಾರ ಬಂದ ನಂತರ. ಪಂಚಾಯ್ತಿ ಸದಸ್ಯರ ಸಮಸ್ಯೆ ಹಲವಾರು ಇರುವ ಹಿನ್ನೆಲೆಯಲ್ಲಿ ಗೌರವಧನವನ್ನು ೨೫೦೦ ರೂ.ಗಳಿಗೆ ಹೆಚ್ಚಿಸಬೇಕು ಎಂದು ಸಹ ಸದನದಲ್ಲಿ ಒತ್ತಾಯಿಸಿದ್ದೇನೆ. ಗ್ರಾಮೀಣಾಭಿವೃದ್ಧಿ ಸದಸ್ಯರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದೇನೆ ಎಂದರು.
ಗ್ರಾ.ಪಂ.ಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಪ್ರಯತ್ನ ಮುಂದುವರಿಸುತ್ತೇನೆ. ನಮ್ಮ ಮೇಲೆ ಸದಸ್ಯರು ವಿಶ್ವಾಸ ಇಡಬೇಕು ಎಂದು ಮನವಿ ಮಾಡಿದರು.
ಇಲ್ಲಿ ವರೆಗೆ ಯಾರೊಂದಿಗೂ ದರ್ಪವನ್ನು ತೋರಿಲ್ಲ. ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಂಡಿದ್ದೇನೆ. ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸ, ಪ್ರಿತಿಯಿಂದ ಮಾತನಾಡಿಸಿದ್ದೇನೆ. ಪರಿಷತ್ತಿಗಿರುವ ಇತಿ ಮಿತಿಯಲ್ಲಿ ಕೆಲಸವನ್ನು ಮಾಡಿದ್ದೇನೆ. ನನಗೆ ಈ ವಿಚಾರದಲ್ಲಿ ತೃಪ್ತಿ ತಂದಿದೆ. ಇದೇ ಕಾರಣಕ್ಕೆ ಪಕ್ಷ ಮತ್ತು ಸರ್ಕಾರ ನಮ್ಮನ್ನು ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆ ಮಾಡಿತ್ತು ಎಂದು ತಿಳಿಸಿದರು.
ವಿರೋಧ ಪಕ್ಷದ ಮುಖಂಡರು ಏನೂ ಕೆಲಸ ಮಾಡಿಲ್ಲ ಎಂದು ನಮ್ಮ ವಿರುದ್ಧ ಆರೋಪ ಮಾಡುತ್ತಾರೆ. ಆದರೆ ಅವರೇ ಅರ್ಥ ಮಾಡಿಕೊಳ್ಳಬೇಕು. ತಾವು ಪರಿಷತ್ತಿಗೆ ಆಯ್ಕೆಯಾಗಿದ್ದಾಗ ಏನು ಕೆಲಸ ಮಾಡಿದ್ದೀರಿ ಎಂಬ ಆತ್ಮಾವಲೋಕನ ಮಾಡಿಕೊಂಡರೆ ಅವರಿಗೆ ಉತ್ತರ ಅಲ್ಲೇ ಸಿಗುತ್ತದೆ ಎಂದರು.
ಬೀರೂರು ಎನ್. ದೇವರಾಜ್ ಅವರು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದು, ನಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅವರು ಬಿಜೆಪಿ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss