ಜೆಟ್ ಏರ್‌ವೇಸ್‌ 2.0 ಹಾರಾಟಕ್ಕೆ ಅನುಮತಿ; ಇದೊಂದು ಭಾವನಾತ್ಮಕ ಕ್ಷಣ ಎಂದ ಸಿಇಒ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್‌ಗೆ ಗೃಹ ಸಚಿವಾಲಯ ಲೈನ್ ಕ್ಲಿಯರ್ ಮಾಡಿದೆ. ವಾಣಿಜ್ಯ ವಿಮಾನ ಸೇವೆಗಳನ್ನು ನಿರ್ವಹಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಂದ ಅನುಮತಿ ದೊರೆತಿದೆ. ಏಪ್ರಿಲ್ 17, 2019 ರಂದು ಜೆಟ್ ಏರ್‌ವೇಸ್‌ನ ಹಾರಾಟ ಕೊನೆಗೊಂಡಿತ್ತು. ಮೂರು ವರ್ಷಗಳ ನಂತರ ಜೆಟ್ ಏರ್ವೇಸ್ ತನ್ನ ರೆಕ್ಕೆಗಳನ್ನು ಬಿಚ್ಚಿ ಹಾರಾಡತೊಡಗಿದೆ. ಮೇ 5 ರಂದು ಜೆಟ್ ಏರ್‌ವೇಸ್ ಹೈದರಾಬಾದ್‌ನಿಂದ ದೆಹಲಿಗೆ ಪರೀಕ್ಷಾರ್ಥ ಹಾರಾಟವನ್ನು ನಡೆಸಿತು.

ಶೀಘ್ರದಲ್ಲೇ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವುದಾಗಿ ಕಂಪನಿಯ ಸಿಇಒ ಸಂಜೀವ್ ಕಪೂರ್ ಘೋಷಿಸಿದ್ದಾರೆ. ಜೆಟ್ ಏರ್‌ವೇಸ್ ಕುಟುಂಬಕ್ಕೆ ಇದೊಂದು ಭಾವನಾತ್ಮಕ ಕ್ಷಣವಾಗಿದೆ ಎಂದು ವರ್ಣಿಸಿದ್ದಾರೆ. ಮೂರು ವರ್ಷಗಳ ನಂತರ ಜೆಟ್ ಏರ್‌ವೇಸ್‌ನ 2.0 ತನ್ನ ಸೇವೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ಸಂತೋಷವಾಗಿದೆ. ಆಕಾಶದಲ್ಲಿ ಜೆಟ್ ಅನ್ನು ಮರಳಿ ಪಡೆಯಲು ಶ್ರಮಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

2019ರಲ್ಲಿ ಜೆಟ್ ಏರ್‌ವೇಸ್ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಹಣಕಾಸಿನ ನೆರವಿನ ಕೊರತೆಯಿಂದಾಗಿ ಜೆಟ್ ಏರ್‌ವೇಸ್ ಅನ್ನು ಮುಚ್ಚುವ ಪ್ರಸ್ತಾಪವಾಯಿತು. ಕೊನೆಗೆ ಮ್ಯಾನೇಜ್ ಮೆಂಟ್ ಕೂಡ ಕೈಕೊಟ್ಟ ಪರಿಣಾಮವಾಗಿ ಅನಿವಾರ್ಯ ಕಾರಣಗಳಿಂದ ಮುಚ್ಚಿದೆವು. ಏಪ್ರಿಲ್ 2019 ರಲ್ಲಿ ಕಂಪನಿ ಮುಚ್ಚುವ ಮೊದಲು 3,500ರೂ ಕೋಟಿ ಸಾಲವನ್ನು ಹೊತ್ತುಕೊಳ್ಳಬೇಕಾಯಿತು.

ಪ್ರಯಾಣಿಕರ ಟಿಕೆಟ್ ರದ್ದುಗೊಂಡಿದ್ದರಿಂದ ಇನ್ನೂ 3,500 ಕೋಟಿ ರೂ ಹೆಚ್ಚುವರಿ ಸಾಲದ ಜೊತೆಗೆ ಇತರೆ ಸಾಲ ಸೇರಿ ಒಟ್ಟು 8,500 ಕೋಟಿ ರೂ ಹೊಡೆತ ಬಿತ್ತು. ಪರಿಣಾಮವಾಗಿ, ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಜೆಟ್ ಏರ್‌ವೇಸ್‌ನ 16,500 ಉದ್ಯೋಗಿಗಳು ರಸ್ತೆಗೆ ಬಿದ್ದರು. ಇದೀಗ ಜೆಟ್‌ ಏರ್‌ವೇಸ್‌ ಪುನಃ ಪ್ರಾರಂಭವಾಗಿರುವುದು ಕಂಪನಿಗೆ ರೆಕ್ಕೆ ಬಂದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!