ಹೊಸದಿಗಂತ ವರದಿ ಬೆಳಗಾವಿ:
ಅಪರಿಚಿತರ ಗುಂಡಿನ ದಾಳಿಗೆ ಯುವಕನೊಬ್ಬ ಬಲಿಯಾದ ಘಟನೆ ರವಿವಾರ ತಡರಾತ್ರಿ
ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಯುವಕ ಅಲ್ತಾಫಗೌಸ್ ಮಕಾಂದರ್ ( 27) ಸಾವನ್ನಪ್ಪಿದ್ದಾನೆ.
ಹಲಸಿ – ಬೇಕವಾಡ ರಸ್ತೆಯ ನರಸೇವಾಡಿ ಬ್ರಿಡ್ಜ್ ಬಳಿ ರವಿವಾರ ಮಧ್ಯೆ ರಾತ್ರಿ ಮೂರು ಗಂಟೆಗೆ ಈ ಗುಂಡಿನ ದಾಳಿ ನಡೆದಿದೆ.
ಅಪರಿಚಿತರ ಗುಂಡಿನ ದಾಳಿಯಿಂದ ಯುವಕ ಅಲ್ತಾಫ್ ಗೌಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್, ನಂದಗಡ ಪೊಲೀಸ್ ನಿರೀಕ್ಷಕ ಎಸ್. ಸಿ. ಪಾಟೀಲ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.