ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮ್ಯಾನ್ಮಾರ್ನಲ್ಲಿ ಉಂಟಾದ ಬದಲಾವಣೆಗಳಿಂದ ಸದ್ಯ ಅಲ್ಲಿ ಸರ್ಕಾರ ಉರುಳಿದ್ದು, ಮಿಲಿಟರಿ ಆಡಳಿತ ಜಾರಿಯಾಗಿದ್ದು, ಜನರು ದಂಗೆಯೆದ್ದಿದ್ದಾರೆ.
ಮಿಲಿಟರಿ ಆಡಳಿತವೂ ಮ್ಯಾನ್ಮಾರ್ನಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಈಗ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಹೀಗಾಗಿ ಅಲ್ಲಿನ ಕೆಲವು ಮ್ಯಾನ್ಮಾರ್ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಭಾರತದತ್ತ ಮುಖಮಾಡಿದ್ದು, ಗಡಿಯತ್ತ ಹೊರಟಿದ್ದಾರೆ.
ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ರಾಜ್ಯ ಮಿಜೋರಾಂನಲ್ಲಿ ಅಲ್ಲಿನ ಪೊಲೀಸರು ಮತ್ತು ಪ್ರಜೆಗಳು ಆಶ್ರಯ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅವರಿಗೆಲ್ಲರಿಗೂ ಕೋವಿಡ್ ಪರೀಕ್ಷೆಗಳ ನಂತರ ಲುಂಗ್ಕಾವ್ಲ್ ಗ್ರಾಮದ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಉನ್ನತ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಒಳನುಗ್ಗುವವರ ಸಂಖ್ಯೆಯನ್ನು ಬಹಿರಂಗಪಡಿಸಲು ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.
ಚಂಪೈ ಜಿಲ್ಲಾಧಿಕಾರಿ ಮಾರಿಯಾ ಸಿ.ಟಿ. ಜುವಾಲಿ ಈ ಕುರಿತು ಮಾಹಿತಿ ನೀಡಿದ್ದು, ಗುರುವಾರ ಮಧ್ಯಾಹ್ನ ಕೆಲವರು ನಮ್ಮ ಜಿಲ್ಲೆಗೆ ಪ್ರವೇಶಿಸಿದ್ದು, ಮ್ಯಾನ್ಮಾರ್ನಿಂದ ಬಂದ ಪ್ರಜೆಗಳಿಗೆ ಜಿಲ್ಲಾಡಳಿತಗಳು ಆಹಾರ ಮತ್ತು ಆಶ್ರಯ ನೀಡಿದೆ ಎಂದು ತಿಳಿಸಿದ್ದಾರೆ.