ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಮಂಡ್ಯ :
ಮಂಡ್ಯ ವೈದ್ಯಕೀಯ ಆಸ್ಪತ್ರೆ ಹಾಗೂ ಒಕ್ಕಲಿಗರ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ಶಾಸಕ ಎಂ.ಶ್ರೀನಿವಾಸ್ ಹಾಗೂ ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು ಭೇಟಿ ನೀಡಿ ಸ್ವಚ್ಛತೆ ಹಾಗೂ ಸೋಂಕಿತರಿಗೆ ನೀಡುತ್ತಿರುವ ಊಟವನ್ನು ಖುದ್ದು ಪರಿಶೀಲನೆ ನಡೆಸಿದರು.
ಮೊದಲಿಗೆ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಕೇಂದ್ರದಲ್ಲಿರುವ ರೋಗಿಗಳ ಸಂಖ್ಯೆ, ಖಾಲಿ ಇರುವ ಹಾಸಿಗೆಗಳು, ವೆಂಟಿಲೇಟರ್ ಅಳವಡಿಕೆ ಹಾಗೂ ಆಕ್ಸಿಜನ್ ದಾಸ್ತಾನಿನ ಬಗ್ಗೆ ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್ ಅವರಿಂದ ಮಾಹಿತಿ ಪಡೆದುಕೊಂಡರು.
ಈ ಸಮಯದಲ್ಲಿ ವಿವರಣೆ ನೀಡಿದ ಡಾ.ಎಂ.ಆರ್.ಹರೀಶ್, ಆಸ್ಪತ್ರೆಯಲ್ಲಿರುವ ವೆಂಟಿಲೇಟರ್ನ 28 ಬೆಡ್, 303 ಹಾಸಿಗೆಗಳಲ್ಲಿ ಸೋಂಕಿತರು ಭರ್ತಿಯಾಗಿದ್ದಾರೆ. ಹೆಚ್ಚುವರಿಯಾಗಿ ಬಂದಿರುವ 25 ವೆಂಟಿಲೇಟರ್ಗಳಲ್ಲಿ 10 ವೆಂಟಿಲೇಟರ್ಗಳನ್ನು ಅಳವಡಿಸಲಾಗಿದೆ. ಉಳಿದ 15 ವೆಂಟಿಲೇಟರ್ಗಳನ್ನು ಶೀಘ್ರವೇ ಅಳವಡಿಸಲಾಗುವುದು ಎಂದು ಹೇಳಿದರು.
ನೋಟೀಸ್ ಜಾರಿಗೆ ಸೂಚನೆ:
ಆಸ್ಪತ್ರೆ ಆವರಣದಲ್ಲಿ ಗಿಡ-ಗಂಟೆಗಳು ಬೆಳೆದುಕೊಂಡಿರುವುದು, ಮಣ್ಣಿನ ರಾಶಿ, ಮೆಡಿಕಲ್ ಕಾಲೇಜಿನ ಹಿಂಭಾಗ ಕಲ್ಮಶ ನೀರು ಕಟ್ಟಿಕೊಂಡಿರುವುದನ್ನು ಕಂಡು ಕೆಂಡಾಮಂಡಲರಾದ ಶಾಸಕರು ಸ್ವಚ್ಛತೆ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರನಿಗೆ ತರಾಟೆ ತೆಗೆದುಕೊಂಡು ನೋಟೀಸ್ ಜಾರಿಗೊಳಿಸುವಂತೆ ಮಿಮ್ಸ್ ನಿರ್ದೇಶಕರಿಗೆ ಸೂಚಿಸಿದರು. ಇನ್ನೆರಡು ದಿನಗಳೊಳಗೆ ವ್ಯವಸ್ಥೆ ಸರಿಹೋಗಬೇಕು. ಇಲ್ಲದಿದ್ದರೆ ಟೆಂಡರ್ ರದ್ದುಪಡಿಸುವುದಾಗಿ ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.