ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಹೊನ್ನಾವರ:
ಸರಕೋಡ ಟೊಂಕಾದಲ್ಲಿ ಮಿನುಗಾರಿಕೆ ಬಂದರು ಬೇಡ ಎಂದು ಸ್ಥಳಿಯ ಮೀನುಗಾರರನ್ನು ಒಟ್ಟುಗೂಡಿಸಿಕೊಂಡು ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕವಾಡುತ್ತಿದ್ದಾರೆ ಎಂದು ಶಾಸಕದ್ವಯರಾದ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷದ ಮುಖಂಡರು ಬಂದರು ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. 2016 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಾಣಿಜ್ಯ ಬಂದರು ಮಂಜೂರಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. ಆಗ ಮಂಕಾಳ ವೈದ್ಯ ಶಾಸಕರಾಗಿದ್ದರು. ಆದರೆ ಅವರು ಈಗ ವಾಣಿಜ್ಯ ಬಂದರು ಬೇಡ ಎಂದು ಹೇಳುತ್ತಿದಾರೆ. ಅವರಿಗೆ ನಿಜವಾದ ಕಳಕಳಿ ಇದ್ದರೆ ಈ ಯೋಜನೆ ಬಂದ ಸಮಯದಲ್ಲೇ ಮೀನುಗಾರರೊಂದಿಗೆ ಚರ್ಚಿಸಿ ಯೋಜನೆ ಬೇಕೋ ಬೇಡವೋ ಎಂಬುದನ್ನು ನಿರ್ಣಯಿಸಬೇಕಿತ್ತು. ಈಗ ಹೇಳಿ ಪ್ರಯೋಜನವಿಲ್ಲ. ಬಂದರು ನಿರ್ಮಾಣವಾದರೆ ತಾಲೂಕಿನ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಆಗುವ ಸಾಧ್ಯತೆ ಹೆಚ್ಚಿದೆ ಎಂದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ, ಮಾಜಿ ಶಾಸಕ ಮಂಕಾಳ ವೈದ್ಯ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅವರು ತಮ್ಮ ಅವಧಿಯಲ್ಲಿ ಮೀನುಗಾರರಿಗೆ ಕಿಂಚಿತ್ತೂ ಅನುಕೂಲ ಮಾಡಿಲ್ಲ. ಮಾವಿನಕುರ್ವಾ ಸೇತುವೆಯನ್ನು ರದ್ದು ಮಾಡಿದ್ದ ಮಂಕಾಳ ವೈದ್ಯ ಕಾಸರಕೋಡ ಬಂದರು ಕಾಮಗಾರಿಯನ್ನೂ ರದ್ದು ಮಾಡಬೇಕಿತ್ತು. ಕಾಸರಕೋಡದಲ್ಲಿ ಬಂದರು ಕಾಮಗಾರಿಯಿಂದ ಮೀನುಗಾರಿಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಯಾವುದೇ ಮನೆಗಳಿಗೆ ಹಾನಿಯಾಗುವುದಲ್ಲಿ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ ಭಂಡಾರಿ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ಪ್ರಮುಖರಾದ ಎಂ.ಜಿ.ನಾಯ್ಕ, ಉಮೇಶ ನಾಯ್ಕ, ಶಿವಾನಿ ಶಾಂತಾರಾಮ, ವಿನೋದ ನಾಯ್ಕ ರಾಯಲಕೇರಿ, ಮಂಜುನಾಥ ನಾಯ್ಕ ಗೇರುಸೊಪ್ಪಾ, ಗಣಪತಿ ನಾಯ್ಕ ಬಿ.ಟಿ., ದತ್ತಾತ್ರಯ ಮೇಸ್ತ, ಲೋಕೇಶ ಮೇಸ್ತ, ಸುರೇಶ ಖಾರ್ವಿ, ಮೇಧಾ ನಾಯ್ಕ, ಭಾಗ್ಯ ಮೇಸ್ತ, ಸುರೇಶ ಹರಿಕಾಂತ ಇತರರಿದ್ದರು.