Thursday, August 11, 2022

Latest Posts

ಸಚಿವ ಸಿ.ಸಿ.ಪಾಟೀಲ್ ರಿಂದ ಪಿಡಬ್ಲ್ಯೂಡಿ ವಿಭಾಗ ಕಚೇರಿ, ವಿಐಪಿ ಕಚೇರಿ ಉದ್ಘಾಟನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ನನ್ನ ಅಧಿಕಾರದ ಅವಧಿಯಲ್ಲಿ ಚಿತ್ರದುರ್ಗದ ಅಭಿವೃದ್ಧಿಗೆ ಬೇಕಾದ ಅನುದಾನ ಹಾಗೂ ಸಹಕಾರ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆ ವಿಭಾಗ ಕಚೇರಿ, ವಿಐಪಿ ಅತಿಥಿ ಗೃಹ ಉದ್ಘಾಟನೆ, ವಿವಿಐಪಿ ಅತಿಥಿ ಗೃಹ ಹಾಗೂ ಸರ್ಕ್ಯೂಟ್ ಹೌಸ್ ಶಂಕು ಸ್ಥಾಪನೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿ ಸ್ಥಳಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯು ರಾಜ್ಯದ ಮಧ್ಯ ಬಾಗದಲ್ಲಿದೆ. ಹಾಗಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಜನರು ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಇಂತಹ ಸಮಯದಲ್ಲಿ ಮಾರ್ಗಮಧ್ಯೆ ಚಿತ್ರದುರ್ಗದಲ್ಲಿ ಅತಿಥಿ ಗೃಹಗಳಿದ್ದಲ್ಲಿ ಕೆಲವು ಸಮಯದವರೆಗೆ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರಿಸಬಹುದು. ಈ ನಿಟ್ಟಿನಲ್ಲಿ ಇಲ್ಲಿ ಅತಿಥಿ ಗೃಹಗಳ ನಿರ್ಮಾಣ ಮಾಡಲಾಗುತ್ತಿದೆ. ಅದರಂತೆ ಇತರೆಡೆಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಸರ್ಕಾರ ಅತಿಥಿ ಗೃಹಗಳನ್ನು ನಿರ್ಮಾಣ ಮಾಡುತ್ತಿದೆ ಎಂದರು.
ರಸ್ತೆಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಮೊದಲು ಬೆಂಗಳೂರಿಗೆ ಹೋಗಲು ಸಾಕಷ್ಟು ಸಮಯ ಬೇಕಿತ್ತು. ಇದನ್ನು ಮನಗಂಡ ವಾಜಪೇಯಿ ಅವರು ಚತುಷ್ಪಥ ರಸ್ತೆ ನಿರ್ಮಾಣ ಮಾಡಿದರು. ನಂತರ ಈಗ ಷಟ್ಪಥ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ದೂರದ ಪ್ರಯಾಣಕ್ಕೆ ಮತ್ತಷ್ಟು ಅನುಕೂಲವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿ ಅವರ ಪ್ರಯತ್ನ ಎಂದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಪರಿಶ್ರಮದಿಂದ ಚಿತ್ರದುರ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮತ್ತಷ್ಟು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಸಹಕಾರ ನೀಡಲಾಗುವುದು. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಅನೇಕ ರಸ್ತೆಗಳು ಹಾಳಾಗಿವೆ. ಅಲ್ಲದೇ ಓವರ್ ಲೋಡ್ ಹಾವಳಿಯಿಂದ ರಸ್ತೆಗಳು ಹಾಳಾಗುತ್ತಿವೆ. ಇದನ್ನು ತಡೆಯಲು ಸಾರಿಗೆ ಸಚಿವ ಶ್ರೀರಾಮುಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಹೇಳಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ ಸರಿಯಾದ ಅತಿಥಿ ಗೃಹ ಇರಲಿಲ್ಲ. ಜಿಲ್ಲಾ ಕೇಂದ್ರವಾದರೂ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡು ಉತ್ತಮ ರೀತಿಯ ಅತಿಥಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಅಫೆಂಡಿಸ್, ಎಸ್‌ಎಚ್‌ಡಿಪಿ, ಎಸ್‌ಪಿಪಿ, ಟಿಎಸ್‌ಪಿ ಅನುದಾನ ಈ ವಷ ಬಂದಿಲ್ಲ. ಕೂಡಲೇ ಅದನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಚಿತ್ರದುರ್ಗವನ್ನು ಅಪಘಾತ ವಲಯ ಎಂದು ಪರಿಗಣಿಸಬೇಕು. ಜಿಲ್ಲೆಯ ಬಹುದಿನದ ಬೇಡಿಕೆ ಮೆಡಿಕಲ್ ಕಾಲೇಜು ನೆನೆಗುದಿಗೆ ಬಿದ್ದಿದೆ. ಮುಖ್ಯಮಂತ್ರಿ ಬಿಎಸ್‌ವೈ ಅವಧಿಯಲ್ಲಿ ಖಾಸಗಿ ಸಹಭಾಗಿತ್ವ ಎಂದು ಮುಂಜೂರು ಮಾಡಲಾಯಿತು. ನಮಗೆ ಸಂಪೂರ್ಣ ಸರ್ಕಾರಿ ಮೆಡಿಕಲ್ ಕಾಲೇಜು ನೀಡಬೇಕು. ಯಾವುದೇ ಬೇರೆಯವರ ಹಸ್ತಕ್ಷೇಪ ಇರಬಾರದು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ ಮಾತನಾಡಿದರು. ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಪಾಲಕ ಇಂಜಿನಿಯರ್ ಸತೀಶ್‌ಬಾಬು ಸ್ವಾಗತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss