ಕಾಸರಗೋಡಿನಲ್ಲಿ ಸಚಿವರಿಂದ ಧ್ವಜಾರೋಹಣ: ತಲೆಕೆಳಗಾದ ರಾಷ್ಟ್ರಧ್ವಜ

ಹೊಸದಿಗಂತ ವರದಿ, ಕಾಸರಗೋಡು:

ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಲಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಜಿಲ್ಲಾ ಮಟ್ಟದ ಧ್ವಜಾರೋಹಣವನ್ನು ಕೇರಳ ಬಂದರು, ಪ್ರಾಚ್ಯವಸ್ತು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರ್ ಕೋವಿಲ್ ನೆರವೇರಿಸಿದರು. ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ಬುಧವಾರ ಬೆಳಗ್ಗೆ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಸಚಿವರಾಗಲೀ ಅಥವಾ ಇತರ ಅಧಿಕಾರಿಗಳಾಗಲೀ ಗಮನಕ್ಕೆ ಬಂದಿರಲಿಲ್ಲ.
ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿದ ನಂತರ ಸಚಿವ ಅಹಮ್ಮದ್ ದೇವರ್ ಕೋವಿಲ್ ಧ್ವಜವಂದನೆ ಸ್ವೀಕರಿಸಿದರು. ಇದಾದ ಬಳಿಕ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದರು. ಆಗ ಸಚಿವರು ಮತ್ತು ಇತರ ಅಧಿಕಾರಿಗಳು ಗಮನಿಸಿದರು. ನಂತರ ಧ್ವಜವನ್ನು ಮತ್ತೆ ಸರಿಯಾಗಿ ಹಾರಿಸಲಾಯಿತು.
ಇಷ್ಟು ದೊಡ್ಡ ತಪ್ಪಾದರೂ ಸಚಿವರಿಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅರಿವಿಗೆ ಬಾರದಿರುವುದು ದುರದೃಷ್ಟಕರ. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವತಹ ಉಪಸ್ಥಿತರಿದ್ದರು. ಧ್ವಜ ತಲೆಕೆಳಗಾದ ಘಟನೆಯು ವಿವಾದವಾಗುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!