ಸಚಿವ ಕೋಟ ಅವರ ಮಹತ್ವಕಾಂಕ್ಷಿ ಯೋಜನೆ ‘ಓಬವ್ವ ಆತ್ಮರಕ್ಷಣೆ ಕಲೆ’ಗೆ ಫೆ. 7ರಂದು ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗಾಗಿ ಕರ್ನಾಟಕ ಸರಕಾರ ‘ಓಬವ್ವ ಆತ್ಮರಕ್ಷಣೆ ಕಲೆ ಯೋಜನೆ’ಯನ್ನು ಪರಿಚಯಿಸುತ್ತಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಅನುಷ್ಠಾನಗೊಳ್ಳುವ ಈ ಯೋಜನೆಗೆ ಫೆ. 7ರಂದು ಚಾಲನೆ ಸಿಗಲಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರ ವಹಿಸಿದ ತಕ್ಷಣ, ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗಾಗಿ ಇಲಾಖಾ ಹಾಸ್ಟೆಲ್‌ಗಳಲ್ಲಿ ಕರಾಟೆ ತರಬೇತಿ ನೀಡುವ ಯೋಜನೆಯ ಕುರಿತು ಪ್ರಸ್ತಾವಿಸಿದ್ದರು. ಅದರಂತೆ ಈಗಾಗಲೇ ರಾಜ್ಯಾದ್ಯಂತ ಪ್ರಾಯೋಗಿಕವಾಗಿ 100 ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ. 7ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಲಾಖೆಯಿಂದ ಸಮವಸ್ತ್ರ ವಿತರಣೆ:
ಈ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಲಾಖಾಧಿಕಾರಿಗಳ ಸಭೆ ನಡೆಸಿ, ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ತಲಾ 100 ಮಕ್ಕಳು ಕಲೆಯನ್ನು ಪ್ರದರ್ಶಿಸಲಿದ್ದಾರೆ. ತರಬೇತಿ ಪಡೆಯುವ ಮಕ್ಕಳಿಗೆ ಇಲಾಖೆಯ ವತಿಯಿಂದ ಸಮವಸ್ತ್ರ ನೀಡಲು ಸಿದ್ಧತೆ ನಡೆಸಲಾಗಿದೆ. ಉತ್ತಮ ಗುಣಮಟ್ಟದ ಸಮವಸ್ತ್ರಗಳನ್ನು ವಿತರಿಸಲು ಸಚಿವರು ಸೂಚಿಸಿದ್ದಾರೆ.

1700ಕ್ಕೂ ಅಧಿಕ ಸಂಸ್ಥೆಗಳಲ್ಲಿ ಜಾರಿ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 629 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಸುಮಾರು 50ಸಾವಿರ ಹೆಣ್ಣುಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ 257 ಹಾಸ್ಟೆಲ್‌ಗಳ 30ಸಾವಿರ ಹೆಣ್ಣುಮಕ್ಕಳು ಹಾಗೂ 818 ಕ್ರೈಸ್ ವಸತಿ ಶಾಲೆಗಳ 1.02 ಲಕ್ಷ ಹೆಣ್ಣುಮಕ್ಕಳು ತರಬೇತಿ ಪಡೆಯಲಿದ್ದಾರೆ. ರಾಜ್ಯದಲ್ಲಿ ಒಟ್ಟು 1704 ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳ 1.82 ಲಕ್ಷ ಹೆಣ್ಣು ಮಕ್ಕಳು ಈ ಯೋಜನೆಯಲ್ಲಿ ಆತ್ಮ ರಕ್ಷಣೆ ಕಲೆಯ ತರಬೇತಿ ಪಡೆಯುವ ಗುರಿ ಹೊಂದಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಹಿಳಾ ತರಬೇತುದಾರರ ನಿಯೋಜನೆ:
ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಮಹಿಳಾ ತರಬೇತುದಾರರನ್ನೇ ನಿಯೋಜಿಸಲಾಗುತ್ತದೆ. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಮಹಿಳಾ ತರಬೇತುದಾರರು ಮಕ್ಕಳನ್ನು ತರಬೇತುಗೊಳಿಸುತ್ತಾರೆ. ಈಗಾಗಲೇ 100 ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ತರಬೇತಿ ಪ್ರಾರಂಭಗೊಂಡಿದ್ದು, ಗೌರವ ಧನದ ಆಧಾರದಲ್ಲಿ ಸಾವಿರಕ್ಕೂ ಮಿಕ್ಕಿ ತರಬೇತುದಾರರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!