ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಯೂರೋಪ್‌ ಸಂಸ್ಥೆಗಳಿಗೆ ಆಹ್ವಾನ ನೀಡಿದ ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನವೆಂಬರ್‌ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ‌ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ಗುರಿಯೊಂದಿಗೆ ಬೃಹತ್ ಮತ್ತು‌ ಮಧ್ಯಮ‌ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ನೇತೃತ್ವದ ನಿಯೋಗ 7 ದಿನಗಳ ಯೂರೋಪ್‌ ಪ್ರವಾಸ ಕೈಗೊಂಡಿದ್ದು, ಈ ವೇಳೆ ಪ್ರಮುಖ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ.
ವೇದಾಂತ ಗ್ರೂಪ್ ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರನ್ನು ಲಂಡನ್‌ನಲ್ಲಿ ಗುರುವಾರ ಸಂಜೆ ಭೇಟಿ ಮಾಡಿದ ಸಚಿವ ಡಾ. ಮುರುಗೇಶ ಆರ್‌ ನಿರಾಣಿ, ರಾಜ್ಯದಲ್ಲಿನ ಹೂಡಿಕೆ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಆ ಬಳಿಕ ಯುಕೆಐಬಿಸಿಯ ವ್ಯವಸ್ಥಾಪಕ ನಿರ್ದೇಶಕ ಕೆವಿನ್ ಮೆಕೋಲ್ ಅವರನ್ನು ಭೇಟಿಯಾದರು.  ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಯುಕೆಐಬಿಸಿ ಮತ್ತು ಕರ್ನಾಟಕದ ನಡುವಿನ ಸಹಯೋಗದ ಅವಕಾಶಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ.
ಬಳಿಕ ಸ್ವಿಂಡನ್‌ನಲ್ಲಿರುವ ಡೈನಾಮ್ಯಾಟಿಕ್ಸ್ ಟೆಕ್ನಾಲಜಿ ಕೇಂದ್ರಕ್ಕೆ ಭೇಟಿ ನೀಡಿ, ಕಂಪನಿಯ ಮುಖ್ಯಸ್ಥ ಟೊಬಿ ಮಲ್ಹೋತ್ರ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ ನೀಡಿದರು.
ಆ ಬಳಿಕ ಲಂಡನ್‌ನಲ್ಲಿರುವ ಕನ್ನಡ ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿರಾಣಿ, ‘ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಯೂರೋಪ್‌ ನಡುವಿನ ಉತ್ತಮ ಔದ್ಯಮಿಕ ಸಂಬಂಧಕ್ಕೆ ಕಾರಣರಾದ ಎಲ್ಲರನ್ನು ಅಭಿನಂಧಿಸಿದರು. ಜತೆಗೆ, ಜಾಗತಿಕ ಹೂಡಿಕೆದಾರರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರುʼ. ನಿಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ಅವರನ್ನೊಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!