Saturday, August 13, 2022

Latest Posts

ಕಾಮನೂರಿನ ಸಾವಯವ ಮಾವಿನ ತೋಟಕ್ಕೆ ತೋಟಗಾರಿಕಾ ಸಚಿವರ ಭೇಟಿ

ಹೊಸ ದಿಗಂತ ವರದಿ, ಕೊಪ್ಪಳ:

ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ನೈಸರ್ಗಿಕವಾಗಿ ಹಣ್ಣುಗಳನ್ನು ಬೆಳೆಯಬೇಕು.
ರಾಸಾಯನಿಕಗಳನ್ನು ಬಳಕೆ ಮಾಡದೇ ಆರೋಗ್ಯಯುತ ಆಹಾರವನ್ನು ಉತ್ಪಾದನೆ ಮಾಡಬೇಕು ಎಂದು ರಾಜ್ಯ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ್ ಹೇಳಿದರು.
ಅವರು ಮಂಗಳವಾರ ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದಲ್ಲಿರುವ ನಾರಾಯಣರಾವ್ ಪೊಲೀಸ್ ಪಾಟೀಲ್ ಅವರ ಸಾವಯವ ಪದ್ಧತಿಯ ಮಾವಿನ ತೋಟಕ್ಕೆ ಭೇಟಿ ನೀಡಿ, ಸಾವಯವ ಪದ್ಧತಿಯ ಬಳಕೆ ಮಾಡಿಕೊಂಡಿರುವುದನ್ನು ವೀಕ್ಷಿಸಿ ಮಾತನಾಡಿದರು.
ರಾಜ್ಯದಲ್ಲಿ ಬಹುತೇಕ ಜನರು ಸಾವಯವ ಪದ್ಧತಿಯನ್ನು ಅಳವಡಿಕೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ. ಇದೇ ರೀತಿಯಾಗಿ ವಿವಿಧ ರೈತರು ಕೃಷಿ ವಿಜ್ಞಾನಿ ಡಾ.ಶೇಷಗಿರಿ ಗುಬ್ಬಿ ಅವರಿಂದ ಮಾರ್ಗದರ್ಶನ ಪಡೆದು, ರಾಸಾಯನಿಕ ಮತ್ತು ಕೀಟನಾಶಕ ಬಳಕೆ ಮಾಡುವುದನ್ನು ಬಿಡಬೇಕು ಎಂದು ತೋಟಗಾರಿಕೆ ಸಚಿವರು ರೈತರಿಗೆ ಸಲಹೆ ನೀಡಿದರು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾವು ಮುಂದುವರೆಯುತ್ತಿದ್ದರೂ ಕೂಡಾ ಹಲವಾರು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುತ್ತಿರುವುದರಿಂದ ನಾವು ಸೇವಿಸುವ ಆಹಾರ ವಿಷ ಪೂರಿತ ಆಗುತ್ತಿದೆ. ಹಾಗಾಗಿ ರೈತರು ಹಳೆಯ ಕಾಲದ ಕೃಷಿ ಪದ್ಧತಿಗಳನ್ನು ಮತ್ತೆ ರೂಢಿಸಿಕೊಳ್ಳಬೇಕಾಗಿದೆ. ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಅನೇಕ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ತೋಟಗಾರಿಕೆ ಉಪನಿರ್ದೇಶಕರು, ಅಧಿಕಾರಿಗಳು ರೈತರ ತೋಟಕ್ಕೆ ತೆರಳಿ, ಅವರಿಗೆ ಉಪಯುಕ್ತವಾಗುವ ಮಾರ್ಗದರ್ಶನವನ್ನು ಮಾಡಬೇಕು. ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆ ಬಂದಲ್ಲಿ ಅವರ ಸಮಸ್ಯೆಗಳಿಗೆ ತೋಟಕ್ಕೆ ಹೋಗಿ ಪರಿಹಾರ ಕಲ್ಪಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭ ತೋಟಗಾರಿಕೆ ಇಲಾಖೆಯ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಕೆಡಿಪಿ ಸದಸ್ಯ ಅಮರೇಶ ಕರಡಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಗನ್ನಾಥರೆಡ್ಡಿ, ತೋಟಗಾರಿಕೆ ಉಪನಿರ್ಧೇಶಕ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನಮೂರ್ತಿ, ಕೇಂದ್ರ ಸ್ಥಾನಿಕ ಸಹಾಯಕ ಮಂಜುನಾಥ, ಡಾ.ಅನುರಾಧ ಮತ್ತು ಕಾಮನೂರು ಗ್ರಾಮದ ರೈತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss