Sunday, April 18, 2021

Latest Posts

ವರ್ತುಲ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಲೋಕೋಪಯೋಗಿ ಸಚಿವರಿಂದ ಆದೇಶ: ಶಾಸಕ ಸಿ.ಟಿ.ರವಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನಗರ ಸುತ್ತ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ತಯಾರಿಸಲು ಲೋಕೋಪಯೋಗಿ ಸಚಿವರಿಂದ ಆದೇಶ ಹೊರಡಿಸಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ಬುಧವಾರ ನಗರದ ವಿಜಯಪುರ ಬಡಾವಣೆಯಲ್ಲಿ ಸ್ಥಾಪಿಸಲಾಗಿರುವ ಶುದ್ಧ ಗಂಗಾ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿ ಮಾತನಾಡಿದರು.
ಅಭಿವೃದ್ಧಿ ಎಂದರೆ ಶಿವಮೊಗ್ಗ, ಹಾಸನ ತೋರಿಸಬೇಕಿಲ್ಲ, ಚಿಕ್ಕಮಗಳೂರು ಸಹ ಅವೆರಡು ಜಿಲ್ಲೆಗಳ ಜೊತೆಗಿದೆ. ಯಾವುದರಲ್ಲೂ ಚಿಕ್ಕಮಗಳೂರಿಗೆ ಕೊರತೆ ಆಗಬಾರದು, ಅಭಿವೃದ್ಧಿಯಲ್ಲಿ ಹಿಂದೆ ಬೀಳಬಾರದು ಎನ್ನುವುದು ಆದ್ಯತೆ ಇದೆ. ಕಡೂರು-ಚಿಕ್ಕಮಗಳೂರು-ಮುಡಿಗೆರೆ ರಸ್ತೆ ಕಾಮಗಾರಿ ವೇಗಗತಿಯಲ್ಲಿ ನಡೆಯುತ್ತಿದೆ. ಇದಲ್ಲದೆ ಬೈಪಾಸ್ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ಆಗಿದೆ ಎಂದರು.
ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಬೇಕು ಎನ್ನುವುದು ಬಹಳ ವರ್ಷಗಳ ಕನಸಾಗಿತ್ತು. ಈಗ ಮೆಡಿಕಲ್ ಕಾಲೇಜು ಜೊತೆಗೆ ಸುಸಜ್ಜಿತ ಆಸ್ಪತ್ರೆಯನ್ನೂ ಮಂಜೂರು ಮಾಡಿಸಿದ್ದೇನೆ. ಟೆಂಡರ್ ಕರೆದು ವೇಗವಾಗಿ ಕಾಮಗಾರಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಒಳ ಚರಂಡಿ ಯೋಜನೆಗೆ 82 ಕೋಟಿ ರೂ. ಮಂಜೂರಾತಿ ದೊರಕಿಸಿ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಶೇ.10 ರಷ್ಟು ಕಾಮಗಾರಿಯನ್ನು ಮೇ, ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಅಮೃತ್ ಯೋಜನೆ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಬಸವನಹಳ್ಳಿ ಕೆರೆ ಅಭಿವೃದ್ಧಿಗೆ 38 ಕೋಟಿ ರೂ. ಯೋಜನೆಯ ನೀಲನಕ್ಷೆಯನ್ನು ತಯಾರು ಮಾಡಿ ಈಗಾಗಲೇ ಮಂಜೂರಾತಿ ದೊರಕಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಈ ಕೆರೆ ಜಿಲ್ಲೆಯ ಅತ್ಯಂತ ಉತ್ಕøಷ್ಟ ಪ್ರವಾಸೋದ್ಯಮ ತಾಣವಾಗಿ ಬದಲಾಗಲಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇವೆ ಎಂದರು.
ಒಳಚರಂಡಿ ಹಾಗೂ ಅಮೃತ್ ಯೋಜನೆ ಕಾಮಗಾರಿ ಪ್ರಾರಂಭವಾದ ನಂತರ ರಸ್ತೆಗಳನ್ನ ಅನಿವಾರ್ಯವಾಗಿ ಅಗೆಯಬೇಕಾಯಿತು. ಎಲ್ಲಾ ಕಡೆ ರಸ್ತೆಗಳ ಬಗ್ಗೆ ಕೂಗು ಕೇಳಿಬರುತ್ತಿತ್ತು. ಅದಕ್ಕಾಗಿ ಎಸ್‍ಎಫ್‍ಸಿ ಯಿಂದ 5 ಕೋಟಿ ರೂ., ವಿಶೇಷ ಅನುದಾನವಾಗಿ 16 ಕೋಟಿ ರೂ. ಸೇರಿ ಒಟ್ಟು 21 ಕೋಟಿ ರೂ.ಗಳನ್ನು ನಗರದ ರಸ್ತೆಗಳಿಗಾಗಿ ಮಂಜೂರು ಮಾಡಿಸಲಾಗಿದೆ. ಅದರ ಕೆಲಸ ಈಗ ಪ್ರಾರಂಭವಾಗಿದೆ ಎಂದು ಹೇಳಿದರು.
ಇದಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿ ಬಯಲು ಜಿಮ್ ಮಂಜೂರು ಮಾಡಿಸಲಾಗಿದೆ, ತಿಲಕ್ ಪಾರ್ಕ್, ಜಿಲ್ಲಾ ಆಟದ ಮೈದಾನ, ಬೈಪಾಸ್ ರಸ್ತೆ, ಹೌಸಿಂಗ್ ಬೋರ್ಡ್ ಹಾಗೂ ರತ್ನಗಿರಿ ಬೋರೆಗಳಲ್ಲಿ ಗಳಲ್ಲಿ ಓಪನ್ ಜಿಮ್ ಅಳವಡಿಸಲಾಗಿದೆ. ಇನ್ನೂ 6 ಕಡೆಗೆ ಮಂಜೂರು ಮಾಡಿಸಲಾಗಿದೆ ಎಂದರು.
ಶುದ್ಧಗಂಗಾ ಘಟಕಗಳನ್ನು ತಿಲಕ್ ಪಾರ್ಕ್, ಉಪ್ಪಳ್ಳಿ, ಕೋಟೆ ಬಡಾವಣೆ, ಬಸವನಹಳ್ಳಿ ಶಾಲೆಗಳಲ್ಲಿ ತಲಾ 10 ಲಕ್ಷ ರೂ.ಗಳಲ್ಲಿ ಸ್ಥಾಪಿಸಲಾಗಿದ್ದು, ಇಂದೇ ಉದ್ಘಾಟನೆ ನೆರವೇರಿಸಲಾಗುತ್ತಿದೆ. ಇದಲ್ಲದೆ ಜಯನಗರ, ಗವನಹಳ್ಳಿ ವಿವಿಧ ಬಡಾವಣೆಗಳಿಗೆ ಮಂಜೂರು ಮಾಡಿಸಲಾಗಿದೆ ಎಂದರು.
ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಆಯ್ತು, ಮೊನ್ನೆ ದೇವೇಗೌಡರು ಹಾಸನಕ್ಕೂ ಮಂಜೂರು ಮಾಡಿಸಿಕೊಂಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಮೂಲ ಸೌಕರ್ಯ ಸಚಿವರನ್ನ ಕರೆಸಿ ಚಿಕ್ಕಮಗಳೂರು ವಿಮಾನ ನಿಲ್ದಾಣದ ಯೋಜನೆಗೆ ಚಾಲನೆ ನೀಡಲು ಆರಂಭಿಕ ಹೆಜ್ಜೆಯನ್ನ ಇಡುತ್ತೇವೆ ಎಂದರು.
4 ಬಾರಿ ಚುನಾವಣೆ ಗೆಲ್ಲಿಸಿ ಶಾಸಕನಾಗಿ ಮಾಡಿಸಿದ್ದಕ್ಕೆ ನಂಬಿಕೆಗೆ ಚ್ಯುತಿ ಬರದಂತೆ ಅಬಿವೃದ್ಧಿಗೆ ಆಧ್ಯತೆ ಕೊಟ್ಟು ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷರುಗಳಾದ ಕೋಟೆ ರಂಗನಾಥ್, ಹೆಚ್.ಡಿ.ತಮ್ಮಯ್ಯ, ಪುಷ್ಪರಾಜ್, ಮಾಜಿ ಉಪಾಧ್ಯಕ್ಷ ಸ್ವಾಮಿ, ಕಾಯಿ ರವಿ, ಮಾಸಿ ಸದಸ್ಯರುಗಳಾದ ಟಿ.ರಾಜಶೇಖರ್, ಲಕ್ಷ್ಮಣ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಬಿಜೆಪಿ ನಗರಾಧ್ಯಕ್ಷ ಮಧುಕುಮಾರ ರಾಜ್ ಅರಸ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ್ ಇತರರು ಹಾಜರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss