Wednesday, August 10, 2022

Latest Posts

ಕೋವಿಡ್ ರೋಗಿಗಳ ಆರೈಕೆಗಾಗಿ ಚಿಕ್ಕಬಳ್ಳಾಪುರದಲ್ಲೂ 1077 ಸಹಾಯವಾಣಿಗೆ ಸಚಿವ ಸುಧಾಕರ್ ಚಾಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ :

ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ ಮತ್ತು ವೈದ್ಯಕೀಯ ಸಲಹೆ ನೀಡಲು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಸ್ಟೆಪ್ ಒನ್ ಸಂಸ್ಥೆ, ಈಶಾ ಫೌಂಡೇಶನ್, ಶ್ರೀ ಸಾಯಿಕೃಷ್ಣ ಸೇವಾ ಟ್ರಸ್ಟ್ ಗಳು ಜಿಲ್ಲಾಡಳಿತದ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗಾಗಿ ಆರಂಭಿಸಿದ ಸಹಾಯವಾಣಿಗೆ ಸಚಿವರು ಹಸಿರು ನಿಶಾನೆ ತೋರಿ, ಕೋವಿಡ್ ರೋಗಿಗಳ ಆರೈಕೆ ವಿಷಯದಲ್ಲಿ ಟೆಲಿಕಾಲಿಂಗ್ ಅತ್ಯಂತ ಮಹತ್ವದ್ದಾಗಿದ್ದು ಜಿಲ್ಲೆಯ ಜನ ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಕೋವಿಡ್ ರೋಗಿಗಳಿಗೆ ನೆರವಾಗಲು ಸ್ಟೆಪ್ ಒನ್ ಕಂಪನಿಯಿಂದ 1077 ಸಹಾಯವಾಣಿ ಆರಂಭಿಸಲಾಗಿದೆ. 178 ಮಂದಿ ವೈದ್ಯರು ಮಾರ್ಗದರ್ಶನ ನೀಡಲಿದ್ದಾರೆ. ಇದಕ್ಕಾಗಿ ಒಟ್ಟು ನೂರು ಲೈನ್ ಗಳನ್ನು ಪಡೆದುಕೊಳ್ಳಲಾಗಿದೆ. ಯಾರೇ ಆಗಲಿ ಪಾಸಿಟಿವ್ ಬಂದ ಕೂಡಲೇ ಮಾರ್ಗದರ್ಶನ ನೀಡಿ ಔಷಧಿ ಕಿಟ್ ನೀಡುವುದು, ಮನೆಯಲ್ಲೇ ಅವರಿಗೆ ವೈದ್ಯಕೀಯ ಮಾರ್ಗದರ್ಶನವನ್ನು ದಿನದ 24 ತಾಸು ಒದಗಿಸಲಾಗುವುದು. ಮನೆಯಲ್ಲಿ ಆರೈಕೆ ಪಡೆಯುತ್ತಿರುವವರಿಗೆ ಸಲಹೆ, ರೋಗ ಲಕ್ಷಣ ಹೆಚ್ಚಿದರೆ ಆಸ್ಪತ್ರೆಗೆ ದಾಖಲಿಸುವುದು ಸೇರಿದಂತೆ ಎಲ್ಲ ಬಗೆಯ ಮಾರ್ಗದರ್ಶನವನ್ನು ಈ ಸಹಾಯವಾಣಿ ಮೂಲಕ ನೀಡಲಾಗುವುದು ಎಂದು ವಿವರಿಸಿದರು.
ಇಂತಹ ಕ್ರಮಗಳಿಂದ ಕೋವಿಡ್ ಆಸ್ಪತ್ರೆಗಳ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುವ ಜತೆಗೆ ಅರ್ಹ ರೋಗಿಗಳಿಗೆ ಹಾಸಿಗೆ ದೊರಕಿಸಲು ನೆರವಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ಮಾದರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚನೆ ನೀಡಲಾಗಿದೆ. ಕೆಲ ಜಿಲ್ಲಾಡಳಿತಗಳು ಈಗಾಗಲೇ ಆರಂಭಿಸಿವೆ ಎಂದು ತಿಳಿಸಿದರು.
ಸಹಾಯವಾಣಿ ಕೇಂದ್ರದಲ್ಲಿ ಸ್ವಯಂಸೇವಾ ಸಂಸ್ಥೆ ವೈದ್ಯರ ಜತೆ ಕೆಲವರಿಗೆ ವೇತನ ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲರೂ ಪರಿಣತಿ ಪಡೆದವರಾಗಿದ್ದು ಸೋಂಕಿತರು ಯಾವುದೇ ಭಯ- ಆತಂಕಗಳಿಲ್ಲದೆ ಇವರ ಸಲಹೆ, ಮಾರ್ಗದರ್ಶನ ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಡಿಆರ್ ಡಿಒ ಜತೆ ಸಮಾಲೋಚನೆ
ಡಿಆರ್ ಡಿಒ ಔಷಧಿಯನ್ನು ರಾಜ್ಯದಲ್ಲಿ ಪರಿಚಯಿಸಬೇಕಿದೆ. ಈ ಸಂಸ್ಥೆ ಆಕ್ಸಿಜನ್ ಜನರೇಟರ್ ಅನ್ನೂ ಕೂಡ ತಯಾರಿಸಿದೆ. ಬೆಂಗಳೂರಿನ ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಸಾವಿರ ಕೆಎಲ್ ಸಾಮರ್ಥ್ಯದ್ದನ್ನು ಅಳವಡಿಸಲು ನಿರ್ಧರಿಸಲಾಗಿದೆ. ನಾಳೆ ಅಥವಾ ನಾಳಿದ್ದು ಅದನ್ನು ಉದ್ಘಾಟಿಸಲಾಗುವುದು. ಆಕ್ಸಿಕೇರ್ ಸಿಸ್ಟಮ್ ಅನ್ನು ಸಂಸ್ಥೆ ಸಿದ್ಧಪಡಿಸಿದೆ. ಆ ಬಗ್ಗೆ ಕೂಡ ಚರ್ಚೆ ನಡೆದಿದ್ದು ಮುಂದಿನ ದಿನಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಅದನ್ನು ಖರೀದಿ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ತಡೆಗಟ್ಟಲು ಸಾಧ್ಯ
ಕೊರೊನಾ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ, 3 ನೇ ಹಂತವನ್ನೂ ತಡೆಗಟ್ಟಬಹುದು. ಲಸಿಕೆಯ ವಿಚಾರದಲ್ಲಿ ಗೊಂದಲ ಬೇಡ. ಲಸಿಕೆ ಲಭ್ಯವಾದಂತೆಲ್ಲ ಜನರಿಗೆ ನೀಡಲಾಗುವುದು. ಈಗ ಆದ್ಯತೆ ಮೇರೆಗೆ ಮೊದಲ ಡೋಸ್ ನೀಡಿರುವ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿ ಎರಡು ಕಂಪನಿಗಳು ಮಾತ್ರ ಲಸಿಕೆ ತಯಾರಿಸುತ್ತಿವೆ. ಹೀಗಾಗಿ ಇದು ಸ್ವಲ್ಪ ಸವಾಲಿನಿಂದ ಕೂಡಿದೆ. ಒಂದು ತಿಂಗಳಿಗೆ 8 ಕೋಟಿ ಲಸಿಕೆ ತಯಾರಾಗುತ್ತಿದೆ. ಕ್ರಮೇಣ 9 ಕೋಟಿಗೆ ಹೆಚ್ಚಳವಾಗಿ, ಜುಲೈ ನಿಂದ ಉತ್ಪಾದನೆ ದುಪ್ಪಟ್ಟಾಗಲಿದೆ ಎಂದರು.
ಲಸಿಕೆಯ ಗುಣಮಟ್ಟದ ಬಗ್ಗೆ ಈ ಹಿಂದೆ ಅನುಮಾನಪಟ್ಟವರು ಈಗ ಲಸಿಕೆ ಕೊರತೆ ಬಗ್ಗೆ ಟೀಕೆಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ. ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಈ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ನಡೆಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು. 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವುದಿಲ್ಲ ಎಂದು ಹೇಳಿಲ್ಲ. ಇದನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆಕ್ಸಿಜನ್ ಬಸ್ ಗೆ ಚಾಲನೆ
ಇದಕ್ಕೂ ಮೊದಲು ಇಂದು ಬೆಳಿಗ್ಗೆ ಬೆಂಗಳೂರಿ ಸ್ವತಂತ್ರ್ಯ ಉದ್ಯಾನವನದ ಬಳಿ ಭುವನಮ್ ಫೌಂಡೇಶನ್ ನಿಂದ ಸಿದ್ಧಪಡಿಸಿರುವ ಆಕ್ಸಿಜನ್ ಬಸ್ ಸೇವೆಗೆ ಸಚಿವ ಸುಧಾಕರ್ ಚಾಲನೆ ನೀಡಿದರು. ನಂತರ ಮಾತನಾಡಿ, ಕಷ್ಟಕಾಲದಲ್ಲಿ ಜನರಿಗೆ ನೆರವಾಗಲು ಭುವನಮ್ ತಂಡ ಆಕ್ಸಿಜನ್ ವ್ಯವಸ್ಥೆ ಮಾಡಿದೆ. ಇದು ಶ್ಲಾಘನೀಯ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss