ಹೊಸದಿಗಂತ ವರದಿ, ಬೀದರ್:
ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಶುಕ್ರವಾರ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಸೇರಿದಂತೆ ವಿವಿಧ ವಿಷಯಗಳ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಸಚಿವರು, ನೌಬಾದ್ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಚೇರಿ ಭೇಟಿ ಸಂದರ್ಭದಲ್ಲಿ ಸಚಿವರು ಹಾಜರಾತಿ ಪರಿಶೀಲಿಸಿ, ಕೆಲವು ದಿನಗಳಿಂದ ಗೈರು ಹಾಜರಿದ್ದ ಇಬ್ಬರು ಸಿಬ್ಬಂದಿಗೆ ವಿವರಣೆ ಕೇಳಿ ನೋಟೀಸ್ ಜಾರಿಗೆ ಆದೇಶಿಸಿದ್ದಾರೆ.
ಈ ಅವ್ಯವಸ್ಥೆ ಕೂಡಲೇ ಸರಿ ಆಗಬೇಕು ಎಂದು ಕಚೇರಿಯ ದ್ವಿತೀಯ ದರ್ಜೆ ಸಹಾಯಕರು ಹಾಗೂ ಇನ್ನೀತರ ಕಚೇರಿಯ ಸಿಬ್ಬಂದಿಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ.