ಕಾಂಗ್ರೆಸ್’ನಿಂದ ವಿಮುಖರಾಗುತ್ತಿರುವ ಅಲ್ಪಸಂಖ್ಯಾತರ ಮುಖಂಡರು!

ಹೊಸದಿಗಂತ, ವರದಿ, ಮಡಿಕೇರಿ:

ಪೊನ್ನಂಪೇಟೆ ತಾಲೂಕಿನ ಕುಟ್ಟ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಮಾಅತ್ ಅಧ್ಯಕ್ಷ ಮೊಹಿನುದ್ದೀನ್ ಕಾಂಗ್ರೆಸ್ ಪಕ್ಷವನ್ನು ತೊರೆದು ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾದರು.
ಇದೇ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಹನೀಫ್ ಹಾಗೂ ಹಂಸ ಕೂಡಾ ಜೆಡಿಎಸ್’ಗೆ ಸೇರ್ಪಡೆಗೊಂಡರು.
ಕುಟ್ಟದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮೊಹಿನುದ್ದೀನ್ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನಪರ ಕಾಳಜಿಯನ್ನು ಮೆಚ್ಚಿ ವಿವಿಧ ಪಕ್ಷಗಳ ಪ್ರಮುಖರು ಜೆಡಿಎಸ್’ಗೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಜೆಡಿಎಸ್ ತಕ್ಷಣ ಸ್ಪಂದಿಸಲಿದೆ ಎಂದು ತಿಳಿಸಿದರು.
ಜಿಲ್ಲೆಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಪಕ್ಷದ ವತಿಯಿಂದ ಮೊದಲ ಹಂತದ ರಸ್ತೆ ತಡೆ ಪ್ರತಿಭಟನೆ ಮೂರ್ನಾಡಿನಲ್ಲಿ ನಡೆಯಲಿದೆ. ನಂತರ ಕುಟ್ಟದಲ್ಲೂ ಹೋರಾಟ ನಡೆಸುವುದಾಗಿ ಹೇಳಿದರು.
ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ದೇಶವ್ಯಾಪಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸುತ್ತಲೇ ಬರುತ್ತಿದೆ. ಜಾತ್ಯತೀತ ನೆಲೆಗಟ್ಟಿನ ಜೆಡಿಎಸ್ ಮಾತ್ರ ಅಲ್ಪಸಂಖ್ಯಾತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುನಿಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಯೂಸುಫ್ ಕೊಂಡಂಗೇರಿ, ಕಾರ್ಯದರ್ಶಿ ಬಲ್ಲಚಂಡ ಗೌತಮ್, ಯುವ ಘಟಕದ ತಾಲೂಕು ಅಧ್ಯಕ್ಷ ಆಲಿ, ಕುಟ್ಟ ವಿಭಾಗದ ಮುಖಂಡ ರೆನ್ನಿ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಪರ್ಮಲೆ ಗಣೇಶ್, ಮಜೀದ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!