ತಮ್ಮವರನ್ನು ಕಾಪಾಡೋಕೆ ಊರಿಗೆ ಊರೇ ಮಾಡಿದ ತ್ಯಾಗ ಎಂಥದ್ದು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾರ ಮನೆ ಸಮಸ್ಯೆಯನ್ನೂ ಅವರವರೇ ಸಂಭಾಳಿಸಬೇಕು. ಈ ಕಾಲದಲ್ಲಿ ಜನರ ನಡವಳಿಕೆಯೂ ಹಾಗೆ ಇದೆ. ಅವರವರ ಕಷ್ಟಕ್ಕೆ ಅವರೇ ಜವಾಬ್ದಾರರು. ಹೀಗಿರುವ ಕಾಲಘಟ್ಟದಲ್ಲಿ ಕೂಡ ಬೆರಳೆಣಿಕೆಯಷ್ಟು ಒಳ್ಳೆಯವರೂ ಇದಾರೆ. ಈ ಸಾಲಿಗೆ ಈ ಊರಿನ ಗ್ರಾಮಸ್ಥರೇ ಜೀವಂತ ಸಾಕ್ಷಿ. ತಮ್ಮವರನ್ನು ಉಳಿಸಿಕೊಳ್ಳುವುದಕ್ಕೆ ಯಾರೂ ಮಾಡದ ಧೈರ್ಯ, ಸಾಹಸ, ಕಾಳಜಿ ತೋರಿದ್ದಾರೆ.

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಥಂಕರ್ ಗ್ರಾಮದ ರಾಮ್ ಸ್ವರೂಪ್ ಯಾದವ್, ಭಟ್ಟು ಬಾಘೇಲ್ ಮತ್ತು ಗುಡ್ಡ ಬಾಘೇಲ್ ಸೋಮವಾರ (ಜನವರಿ 16, 2023) ಕಾಡಿನಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ವೇಳೆ ಕೆಲವು ದುಷ್ಕರ್ಮಿಗಳು ಮೂವರನ್ನ ಅಪಹರಿಸಿದ್ದಾರೆ. ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ರಾಜಸ್ಥಾನದ ತಂಡವೊಂದು ಅವರನ್ನು ಅಪಹರಿಸಿದೆ ಎಂದು ತಿಳಿದುಬಂದಿದ್ದು, ಒಬ್ಬೊಬ್ಬರಿಗೆ 5 ಲಕ್ಷ ರೂ. ಅಂದರೆ ಒಟ್ಟು 15 ಲಕ್ಷ ರೂ. ಕೊಟ್ಟರೆ ಬಿಟ್ಟು ಕಳಿಸುವುದಾಗಿ, ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದ ದಿಕ್ಕುತೋಚದ ಬಡ ಸಂತ್ರಸ್ತರ ಕುಟುಂಬಗಳು ತತ್ತರಿಸಿದರು. ಇವರ ನೋವು ಅರ್ಥ ಮಾಡಿಕೊಂಡ ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ, ಅವರ ಬೆನ್ನಿಗೆ ನಿಂತಿದ್ದಾರೆ. ನಮ್ಮ ಜನರನ್ನು ಮುಕ್ತಗೊಳಿಸೋಣ ಎಂದು ಧೈರ್ಯ ತುಂಬಿದರು. ಊರವರೆಲ್ಲ ಸೇರಿ ಚಂದಾ ಎತ್ತಿದ್ದಾರೆ. ಬಡವರು, ಶ್ರೀಮಂತರೆನ್ನದೆ ಧನಸಹಾಯ ಮಾಡುತ್ತಿದ್ದಾರೆ. ಎಷ್ಟು ಒಟ್ಟುಗೂಡಿಸಿದರೂ ದಿನಗೂಲಿ, ಹಸು ಮೇಯಿಸಿ ಕಾಲ ಕಳೆಯುವ ಜನರ ಬಳಿ 15ಲಕ್ಷ ಎಲ್ಲಿಂದ ಬಂದೀತು ಸ್ವಾಮಿ?. ಇವರ ಪರಿಪಾಟಲು ಹೇಗೋ ಪೊಲೀಸರು ಕಿವಿಗೆ ಬಿದ್ದು, ತಮ್ಮ ಗ್ರಾಮಸ್ಥರ ಕಲ್ಯಾಣಕ್ಕಾಗಿ ಇಡೀ ಗ್ರಾಮ ಒಗ್ಗಟ್ಟಾಗಿರುವುದನ್ನು ಕಂಡು ಪೊಲೀಸರು ಭಾವುಕರಾದರು. ಅವರ ಒಗ್ಗಟ್ಟನ್ನು ಕಂಡು ಬೆರಗಾಗಿ, ಅಭಿನಂದಿಸಿದರು. ಅಪಹರಣಕ್ಕೊಳಗಾಗಿದ್ದವರನ್ನು ರಕ್ಷಿಸಿ ಸುರಕ್ಷಿತವಾಗಿ ಒಪ್ಪಿಸಲು ಮಧ್ಯಪ್ರದೇಶ ಪೊಲೀಸರು ಇದೀಗ ಫೀಲ್ಡಿಗಿಳಿದಿದ್ದಾರೆ. ರಾಜಸ್ಥಾನ ಪೊಲೀಸರೊಂದಿಗೆ ಅಪಹರಣಕಾರರ ಶೋಧ ಕಾರ್ಯ ತೀವ್ರಗೊಂಡಿದೆ.

ಅಪಹರಣಕಾರರ ಪತ್ತೆ ಹಚ್ಚಿದರೆ 10 ಸಾವಿರ ನಗದು ಬಹುಮಾನ ಈಗ ರೂ. 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೇಗಾದರೂ ಸರಿಯೇ ನಿಮ್ಮವರನ್ನು ಕಾಪಾಡುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!