ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ವರದಿ,ಮಂಡ್ಯ :
ಮಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ನರಕಯಾತನೆ ಹೇಳತೀರದಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಕಾರಿಡಾರ್ನಲ್ಲೇ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಂಡು ಜೀವ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿರುವ ಹೃದಯವಿದ್ರಾವಕ ಘಟನೆ ಸೋಮವಾರ ಕಂಡುಬಂದಿದೆ.
ಇದು ಯಾರೋ ಒಬ್ಬರು, ಇಬ್ಬರು ಈ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ಬದಲಿಗೆ 20ಕ್ಕೂ ಹೆಚ್ಚು ಮಂದಿ ಸೋಂಕಿತರು ಬೆಡ್ಗಳು ಸಿಗದೆ ಕಾರಿಡಾರ್ನ ಕಲ್ಲುಬೆಂಚುಗಳ ಮೇಲೆ ಕುಳಿತುಕೊಂಡು ನರಳಾಡುತ್ತಿದ್ದಾರೆ. ಇದರ ಜೊತೆಗೆ ವಿದ್ಯುತ್ ಇಲ್ಲದೆ,ಸ್ಕ್ಯಾನ್ ವ್ಯವಸ್ಥೆಯನ್ನು ಕಾಣದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿರುವ ಕಾರಿಡಾರ್ನಲ್ಲಿ ಈ ಚಿತ್ರಣ ಕಂಡುಬಂದಿತು.
ಸೋಂಕಿತರ ಸಂಬಂಕರು ಮೊಬೈಲ್ ಟಾರ್ಚ್ಗಳನ್ನು ಹಿಡಿದು ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದರೆ, ರಿಪೋರ್ಟ್ಗಳನ್ನು ಕೈಯ್ಯಲ್ಲಿ ಬೀಸತ್ತಾ ಸೋಂಕಿತರ ಜೀವ ಉಳಿಸುವುದಕ್ಕೆ ಹೆಣಗಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಕೆಲವರು ಕಿಟಕಿಗೆ ಒರಗಿಕೊಂಡು ಆಕ್ಸಿಜನ್ ಪಡೆಯುತ್ತಿದ್ದರೆ, ಮತ್ತೆ ಕೆಲವರು ಕುಳಿತುಕೊಂಡು, ವೃದ್ಧರು ಮಲಗಿಕೊಂಡು ಆಕ್ಸಿಜನ್ ಸಿಲಿಂಡರ್ ನೆರವಿನೊಂದಿಗೆ ಉಸಿರಾಡುತ್ತಿದ್ದರು.