ಸಿಗದ ಟಿಕೆಟ್: ರಾಜಕೀಯ ನಿವೃತ್ತಿ ಘೋಷಿಸಿದ ಶಾರದಾ ಶೆಟ್ಟಿ

ಹೊಸದಿಗಂತ ವರದಿ,ಕುಮಟಾ :

ಟಿಕೆಟ್ ವಿಚಾರದಲ್ಲಿ ಪಕ್ಷ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಮೋಸ ಮಾಡಿದೆ, ಹೀಗಾಗಿ ಪಕ್ಷದ ಮೇಲಿರುವ ಗೌರವ ನಿಷ್ಠೆ ಇಲ್ಲವಾಗಿದ್ದು, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹೇಳಿದರು. ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕೊನೆ ಕ್ಷಣದವರೆಗೂ ನನಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ ನನಗೆ ಟಿಕೆಟ್ ತಪ್ಪಿಸಿದವರು ಹಾಗೂ ಈಗ ಟಿಕೆಟ್ ಪಡೆದು ಬಂದವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಭಾವುಕರಾಗಿ ನುಡಿದ ಶಾರದಾ ಶೆಟ್ಟಿ, ನನಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಕರೆ ಮಾಡಿ ಎಂ.ಎಲ್. ಸಿ ಅಥವಾ ನಿಗಮಮಂಡಳಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಮನ ಒಲಿಸುವ ಪ್ರಯತ್ನ ಮಾಡಿದರು. ನನಗೆ ಯಾವುದೇ ಅನುಕಂಪವೂ ಬೇಡ ಹುದ್ದೆಯೂ ಬೇಡ ಎಂದು ಅವರು ಬಿರುಸಾಗಿ ಮಾತನಾಡಿದರು.

ಈ ಹಿಂದೆ ಕಾರ್ಯಕರ್ತರು ಪಕ್ಷೇತರವಾಗಿ ನಿಲ್ಲಲೇಬೇಕೆಂದು ಬಲವಾದ ಒತ್ತಡ ತಂದಿದ್ದ ಕಾರಣದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ನಮ್ಮ ಜೊತೆಗಿದ್ದ ಕಾರ್ಯಕರ್ತರು ಹಾಗೂ ಇಲ್ಲೇ ಬೆಳೆದ ಬಹಳಷ್ಟು ಜನ ಕಾರ್ಯಕರ್ತರು ಕಾಂಗ್ರೆಸ್ ನವರ ಅಮಿಷಕ್ಕೋ ಅಥವಾ ಪಕ್ಷವೆಂಬ ಕಾರಣಕ್ಕೋ ಆ ಕಡೆಗೆ ಹೋಗಿದ್ದಾರೆ. ಅದಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ನಂತರ ಚಿಹ್ನೆ ಬಂದು ಪ್ರಚಾರ ಪ್ರಾರಂಭ ಮಾಡಿ ಎಲ್ಲೆಡೆ ತಲುಪಲು ಕೇವಲ 14 ದಿನಗಳು ಉಳಿದಿದ್ದು, ಎಷ್ಟು ಕಡಿಮೆ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಷ್ಟವೆಂಬ ಕಾರಣಕ್ಕೆ, ಅನೇಕರ ಮಾರ್ಗದರ್ಶನ ಪಡೆದು ನಾಮಪತ್ರ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಸದ್ಯದ ಮಟ್ಟಿಗೆ ರಾಜಕೀಯ ನಿವೃತ್ತಿ ಎಂಬುದಾಗಿ ಘೋಷಿಸಬೇಕೆಂದು ಮನವಿ ಮಾಡಿದ ಘಟನೆಯೂ ನಡೆಯಿತು.ಅದಕ್ಕವರು ಮೌನ ವಹಸಿದರು. ವಿ.ಎಲ್ ನಾಯ್ಕ, ರವಿಕುಮಾರ ಶೆಟ್ಟಿ, ಕೃಷ್ಣಾನಂದ ವರ್ಣೇಕರ್, ತಾರಾಗೌಡ, ಮಧುಸೂಧನ್ ಶೇಟ್, ಮಂಜುನಾಥ ಹರಿಕಂತ್ರ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!