ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗಿನಿಂದ ಮಗುವಿನೊಂದಿಗೆ ಮಹಿಳೆ ನಾಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾದ ಮಹಿಳೆ ಅತ್ತೆಯ ಕಿರುಕುಳದಿಂದ ಮನನೊಂದು ಎರಡು ವರ್ಷದ ಮಗುವಿನ ಜೊತೆ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಧರ್ಮಸ್ಥಳ ಪೊಲೀಸರ ಸಮಯಪ್ರಜ್ಞೆಯಿಂದ ತಾಯಿ ಹಾಗೂ ಮಗು ಬದುಕಿ ಉಳಿದಿದ್ದಾರೆ.
ಮಡಿಕೇರಿಯ ಶುಂಠಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯ ದಿನೇಶ್ ಎಂಬವರ ಪತ್ನಿ ಸೌಮ್ಯ ಮನೆಯಲ್ಲಿ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದರು. ಜೂ. 14 ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮಗುವಿನ ಜೊತೆ ಮನೆ ಬಿಟ್ಟಿದ್ದ ಸೌಮ್ಯ ಸಂಜೆಯಾದರು ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಅನುಮಾನ ಬಂದ ಕುಟುಂಬಸ್ಥರ ಮಹಿಳೆಯ ಪತ್ತೆಗಾಗಿ ಶುಂಠಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.
ಧರ್ಮಸ್ಥಳದ ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಏನಾದರೂ ಹೋಗಿರುವ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು ಸ್ನೇಹಿತನ ಸಹಕಾರದೊಂದಿಗೆ ಧರ್ಮಸ್ಥಳ ಪೋಲಿಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಾಕಾಂತ್ ಪಾಟೀಲ್ ಮತ್ತು ಹೆಡ್ ಕಾನ್ಸಟೇಬಲ್ ಶೇಷಣ್ಣ ತಂಡ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಮಡಿಕೇರಿಯಿಂದ ಬರುವ ಬಸ್ ಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ನಲ್ಲಿ ಮಗುವಿನ ಜೊತೆ ಸೌಮ್ಯ ಪತ್ತೆಯಾಗಿದ್ದಾರೆ.
ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅತ್ತೆಯ ಕಿರುಕುಳದಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಆತ್ಮಹತ್ಯೆಗೆ ನಿರ್ಧರಿಸಿ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮಗು ಮತ್ತು ತಾಯಿಯನ್ನ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಧರ್ಮಸ್ಥಳ ಪೊಲೀಸರ ಕರ್ತವ್ಯಪ್ರಜ್ಞೆ ಹಾಗೂ ಸಮಯಪ್ರಜ್ಞೆಯಿಂದ ಎರಡು ಜೀವಗಳು ಬದುಕುಳಿದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!