ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ವಿಚಿತ್ರ ಘಟನೆ ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಮೂರು ದಿನ ಬಾವಿಯಲ್ಲಿದ್ದ ಮಹಿಳೆ ಬದುಕಿದ್ದೇ ಪವಾಡವಾಗಿದೆ.
ಕಾಣೆಯಾಗಿದ್ದ ವಿವಾಹಿತೆಯೊಬ್ಬಳು ಅದೇ ಗ್ರಾಮದ ಹೊಲವೊಂದರಲ್ಲಿನ ನೀರಿಲ್ಲದ ಹಳೇ ಬಾವಿಯಲ್ಲಿ ಮೂರು ದಿನಗಳ ನಂತರ ಸಿಕ್ಕಿದ್ದಾಳೆ. ಅಸ್ವಸ್ಥಳಾಗಿದ್ದ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಇಲ್ಲಿ ವಿಚಿತ್ರ ಅಂದರೆ ಮಹಿಳೆ ಬಾವಿಗೆ ಬಿದ್ದಿದ್ದು ಹೇಗೆ ಎಂಬ ಮಾಹಿತಿ ಕೇಳಿ ಗ್ರಾಮದ ಜನರೇ ಶಾಕ್ ಆಗಿದ್ದಾರೆ.
ಯಾಕೆಂದರೆ ಯಾರೋ ನನ್ನ ಎಳೆದುಕೊಂಡು ಹೋದರು ಅಂತ ಹೇಳಿದ್ದಾಳೆ. ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆಗಸ್ಟ್ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ನವವಿವಾಹಿತೆಯನ್ನು ಕಿಡ್ನಾಪ್ ಮಾಡಿದ್ದರಂತೆ.
ನವವಿವಾಹಿತೆಯ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಳಂತೆ. ಮಾತ್ರವಲ್ಲದೇ ನನ್ನ ಕೈಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಳು. ಇನ್ನು ನನ್ನ ಕಣ್ಣಿಗೆ ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದು ಭಯಪಡಿಸಿದ್ದಳಂತೆ.