ನೇಪಾಳದಿಂದ ನಾಪತ್ತೆಯಾಗಿದ್ದ ಬಿಳಿ ಬೆನ್ನಿನ ರಣಹದ್ದು ಬಿಹಾರದ ದರ್ಭಾಂಗಾದಲ್ಲಿ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸುಮಾರು ಹತ್ತು ತಿಂಗಳ ಹಿಂದೆ ನೇಪಾಳದಿಂದ ನಾಪತ್ತೆಯಾಗಿದ್ದ ಅಪರೂಪದ ಬಿಳಿ ಬೆನ್ನಿನ ರಣಹದ್ದು ಹತ್ತು ತಿಂಗಳ ಬಳಿಕ ಭಾರತದ ಬಿಹಾರದ ದರ್ಭಾಂಗಾದಲ್ಲಿ ಪತ್ತೆಯಾಗಿದೆ.
ಸಂಪೂರ್ಣ ಅಳಿವಿನಂಚಿನಲ್ಲಿರುವ ಪಕ್ಷಿಯ ಸಂರಕ್ಷಣೆಗೆ ಹಾಗೂ ಅದರ ಸಂತತಿ ಅಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ನೇಪಾಳ ಬಿಳಿ ಬೆನ್ನಿನ ರಣಹದ್ದುಗಳ ಮೇಲೆ ವಿಶೇಷ ಗಮನವಿಟ್ಟಿದೆ.
ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿಗೆ ಸೇರಿದ ಈ ಪಕ್ಷಿಯು ಹಿಮಾಲಯ ರಾಷ್ಟ್ರ ನೇಪಾಳದ ತನಾಹುನ್ ಜಿಲ್ಲೆಯ ರಣಹದ್ದು ಸುರಕ್ಷಿತ ವಲಯದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತ್ತು. ಅದಕ್ಕೆ ರೇಡಿಯೋ ಕಾಲರ್‌ ಟ್ಯಾಗ್‌ ಮಾಡಿದ್ದರೂ ಅದು ಏಕಾಏಕಿ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ನೇಪಾಳ ವನ್ಯಜೀವಿ ಅಧಿಕಾರಿಗಳು ಹದ್ದು ಪತ್ತೆಗೆ ಸಾಕಷ್ಟು ಹುಡುಕಾಟ ನಡೆಸುತ್ತಿದ್ದರು.
ಸುಮಾರು 75 ರಿಂದ 85 ಸೆಂ.ಮೀ ಎತ್ತರವಿರುವ ಬಿಳಿ- ಕತ್ತಿನ ರಣಹದ್ದು ತೀವ್ರವಾಗಿ ಅಳಿವಿನಂಚಿನತ್ತ ಸಾಗುತ್ತಿರುವ ಪ್ರಬೇಧವೆಂದು 2000 ನೇ ಇಸವಿಯಲ್ಲಿ ಪಟ್ಟಿಮಾಡಲಾಗಿದೆ. ಇವುಗಳು ಪ್ರಾಣಿಗಳ ಮೃತದೇಹಗಳನ್ನು ತಿಂದು ಜೀವಿಸುತ್ತವೆ. ಆದರೆ ಪ್ರಾಣಿಗಳಿಗೆ ಪಶುವೈದ್ಯಕೀಯ ಔಷಧ ಡಿಕ್ಲೋಫೆನಾಕ್‌ನೊಂದಿಗೆ ಚಿಕಿತ್ಸೆ ನೀಡುವುದರ ಪರಿಣಾಮವಾಗಿ ಈ ಹಸದ್ದುಗಳ ಜನಸಂಖ್ಯೆಯು ವೇಗವಾಗಿ ಕ್ಷೀಣಿಸಿದೆ.
ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್, ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ ಜೊತೆಗೆ ಭಾರತೀಯ ಉಪಖಂಡದಲ್ಲಿ ಸಾಮಾನ್ಯವಾಗಿ ಮಾನವ ವಾಸಸ್ಥಾನಗಳ ಬಳಿ ಈ ರಣಹದ್ದುಗಳು ಹಿಂದೆ ಬಹಳ ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಈ ಹಕ್ಕಿಗಳು ಹೆಚ್ಚಾಗಿ ನೆಲದ ಮೇಲೆ ಆಹಾರವನ್ನು ಹುಡುಕುತ್ತವೆ. ಮರಗಳು ಮತ್ತು ಬಂಡೆಗಳಲ್ಲಿ ಗೂಡು ಕಟ್ಟಿ ಎತ್ತರದ ಹಾರಾಟದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತವೆ.
ನೇಪಾಳದಲ್ಲಿ ನಾಪತ್ತೆಯಾಗಿದ್ದ ಪಕ್ಷಿ ಇದೀಗ ಬಿಹಾರ ಧರ್ಭಾಂಗ್‌ ನಲ್ಲಿ ಪತ್ತೆಯಾಗಿದ್ದು, ತೀವ್ರ ಆಹಾರದ ಕೊರತೆಯಿಂದಾಗಿ ಅದು ತೀರಾ ದುರ್ಬಲ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾಗಲ್ಪುರದ ಬರ್ಡ್ ರಿಂಗಿಂಗ್ ಮತ್ತು ಮಾನಿಟರಿಂಗ್ ಸ್ಟೇಷನ್‌ನಲ್ಲಿ ರಣಹದ್ದು ವೀಕ್ಷಣೆಯಲ್ಲಿದೆ ಮತ್ತು ಕೆಲವು ದಿನಗಳ ನಂತರ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!