ಹೊಸ ದಿಗಂತ ವರದಿ, ಚಿತ್ರದುರ್ಗ:
ನಗರದ ಅಂದ ಹೆಚ್ಚಿಸುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಬರುವ ಚಿಕ್ಕಪುಟ್ಟ ಸಮಸ್ಯೆಗಳ ನಿವಾರಣೆಗೆ ಬಜೆಟ್ನಲ್ಲಿ ಅಗತ್ಯ ಅನುದಾನ ಕಾಯ್ದಿರಿಸಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ಮಾಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೧-೨೨ನೇ ಸಾಲಿನ ಆಯವ್ಯಯದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ಅನೇಕ ಪಾರ್ಕ್ಗಳಿಗಾಗಿ ಜಾಗ ಬಿಡಲಾಗಿದೆ. ಆದರೆ ಅಭಿವೃದ್ಧಿ ಮಾಡಿಲ್ಲ. ಅವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ವಯೋವೃದ್ಧರು ಸೇರಿದಂತೆ ಹಲವರಿಗೆ ವಾಯುವಿಹಾರಕ್ಕೆ ಅನುಕೂಲವಾಗಲಿದೆ. ಅದರಂತೆ ನೀರು, ರಸ್ತೆ, ಚರಂಡಿ ವ್ಯವಸ್ಥೆಯಲ್ಲಿ ವ್ಯತ್ಯಯವಾದಲ್ಲಿ ಅದರ ನಿವಾರಣೆಗೆ ಅಗತ್ಯ ಅನುದಾನ ಬೇಕಾಗುತ್ತದೆ ಎಂದರು.
ನಗರಸಭೆಗೆ ಬರಬೇಕಾದ ಕರ ಸಂಗ್ರಹ ಸಮರ್ಪಕವಾಗಿ ಆಗಿಲ್ಲ. ಇದರಿಂದ ನಗರಸಭೆಗೆ ನಷ್ಟ ಉಂಟಾಗುತ್ತಿದೆ. ಈ ಕುರಿತು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಧಿಕಾರಿಗಳು ಮಾತ್ರವಲ್ಲ ಸದಸ್ಯರು ಸಹ ಕರ ಸಂಗ್ರಹಣೆಯಲ್ಲಿ ಕೈಜೋಡಿಸಬೇಕು. ಕೆಲವರು ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅಂತಹವರ ಜೊತೆ ಮಾತನಾಡಿ ಮನವೊಲಿಸಿ ತೆರಿಗೆ ಕಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸದಸ್ಯೆ ಕವಿತಾ ಮಾತನಾಡಿ, ೧೦ನೇ ವಾರ್ಡ್ನಲ್ಲಿ ಎತ್ತರದ ಪ್ರದೇಶಕ್ಕೆ ನೀರು ಹತ್ತುತ್ತಿಲ್ಲ ಎಂದರು. ಸದಸ್ಯರಾದ ಅನಿತಾ, ಶ್ರೀದೇವಿ ಇದಕ್ಕೆ ಧ್ವನಿಗೂಡಿಸಿ ನಮ್ಮ ವಾರ್ಡ್ಗಳಲ್ಲಿ ಕೊಳವೆಬಾವಿಗಳಿದ್ದರೂ ಅವುಗಳಿಗೆ ಸಂಪರ್ಕ ಇಲ್ಲದ ಕಾರಣ ನೀರಿಗೆ ತೊಂದರೆಯಾಗಿದೆ ಎಂದರು. ಇಂಜಿನಿಯರ್ ಕಿರಣ್ ಮಾತನಾಡಿ, ಸಂಪರ್ಕ ನೀಡುವುದಾಗಿ ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಸರ್ದಾರ್ ಅಹಮದ್ ಪಾಷ ಇಂಜಿನಿಯರ್ ವಿರುದ್ಧ ಕಿಡಿಕಾರಿದರು.
ಶಾಸಕರೆದುರು ಕೆಲಸ ಮಾಡುವುದಾಗಿ ಹೇಳುವ ನೀವು ಬಳಿಕ ಯಾವುದೇ ಕೆಲಸ ಮಾಡುವುದಿಲ್ಲ. ಸುಮ್ಮನೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಬೇಡಿ. ರೀಜನಲ್ ಸ್ಕೂಲ್ ಬಳಿ ಕೊಳವೆಬಾವಿ ಹಾಕಿಸುವುದಾಗಿ ಹೇಳಿದ್ದಿರಿ. ಆದರೆ ಈವರೆಗೆ ಹಾಕಿಸಿಲ್ಲ. ಯಾವ ಸದಸ್ಯರು ಮಾತನಾಡುವುದಿಲ್ಲ ಎಂದು ನಿಮಗೆ ತಿಳಿದಂತೆ ಮಾಡುವುದು ಸರಿಯಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸರ್ದಾರ್ ಅಹಮದ್ ಪಾಷ ಅಸಮಾಧಾನ ಹೊರಹಾಕಿದರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ವೇತಾ ವೀರೇಶ್, ಪೌರಾಯುಕ್ತ ಹನುಮಂತರಾಜು ಹಾಗೂ ವಿವಿಧ ವಾರ್ಡ್ಗಳ ಸದಸ್ಯರು, ನಗರಸಭೆ ಅಧಿಕಾರಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು.