Wednesday, August 10, 2022

Latest Posts

ಬನಶಂಕರಿ ಬಡಾವಣೆ ಪಾರ್ಕ್ ನಿರ್ಮಾಣಕ್ಕೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ

ಹೊಸದಿಗಂತ ವರದಿ,ಚಿತ್ರದುರ್ಗ:

ಈ ವರ್ಷದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದ್ದು ಮುಂದಿನ ವರ್ಷದ ಅನುದಾನದಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಶ್ವಾಸನೆ ನೀಡಿದರು.
ನಗರದ ರುಡ್‌ಸೆಟ್ ಸಂಸ್ಥೆ ಬಳಿಯ ಬನಶಂಕರಿ ಬಡಾವಣೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಾಣ ಮಾಡಲಿರುವ ಉದ್ಯಾನವನದ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಅನೇಕ ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸಲು ಈ ಸಾಲಿನ ಅನುದಾನದಲ್ಲಿ ಸಾಧ್ಯವಿಲ್ಲ ಮುಂದಿನ ಸಾರಿಯ ಅನುದಾನ ಬಂದಾಗ ಅವುಗಳನ್ನು ಈಡೇರಿಸಲಾಗುವುದು ಎಂದರು.
ಈ ಭಾಗ ಪೂರ್ಣವಾಗಿ ನಗರಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ನಿಮಗೆ ಸೌಲಭ್ಯಗಳು ಏನೇ ಇದ್ದರೂ ಪಂಚಾಯಿತಿ ವತಿಯಿಂದಲೇ ಪಡೆಯಬೇಕಿದೆ. ಆದರೂ ಸಹ ಮಾನವೀಯತೆ ಆಧಾರದ ಮೇಲೆ ನಗರಸಭೆ ವತಿಯಿಂದ ಮೂಲಭೂತ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಚರಂಡಿ, ನೀರು, ಕಸ ವಿಲೇವಾರಿ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸಗಳನ್ನು ಸಂಬಂಧಪಟ್ಟವರಿಂದ ಮಾಡಿಸಿಕೊಳ್ಳಿ. ರಸ್ತೆ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳನ್ನು ನಾನು ಮಾಡಿಸುತ್ತೇನೆ ಎಂದು ಜನತೆಗೆ ಭರವಸೆ ನೀಡಿದ ಶಾಸಕರು, ಈ ಜಾಗ ಖಾಸಗಿಯವರು ನಿರ್ಮಾಣ ಮಾಡಿದ ಬಡಾವಣೆಯಾಗಿದೆ. ಹಾಗಾಗಿ ಇಲ್ಲಿ ಸರ್ಕಾರದ ಸೌಲಭ್ಯ ನೀಡಲು ಬರುವುದಿಲ್ಲ. ಆದರೂ ನಿಮಗೆ ಅಗತ್ಯವಾಗಿ ಬೇಕಾದ ರಸ್ತೆ ಸೇರಿದಂತೆ ಕೂಳವೆಬಾವಿ ಕೂರೆಯಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಡಾವಣೆಯವರು ವಿವಿಧ ರೀತಿಯ ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತಂದರು. ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಅಲ್ಲೇ ಇದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ೧೦ ದಿನದೊಳಗೆ ಪೂರ್ಣ ಮಾಡುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ನಗರಾಬೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್ ಸದಸ್ಯರಾದ ಓಂಕಾರ್, ಶ್ರೇಣಿಕ್, ರೇಖಾ, ಆಯುಕ್ತರಾದ ವಿಜಯಕುಮಾರ್, ನಗರಸಭಾ ಸದಸ್ಯರಾದ ತಾರಕೇಶ್ವರಿ, ಮದಕರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss