Friday, September 30, 2022

Latest Posts

ಶಾಸಕ ಬಂಡೆಪ್ಪ ಖಾಶೆಂಪುರ್ ಪರ  ಧ್ವನಿ ಎತ್ತಿದ ಶಾಸಕ ವೆಂಕಟರಾವ್ ನಾಡಗೌಡ

ಹೊಸದಿಗಂತ ವರದಿ ಬೆಂಗಳೂರು :

ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಇತ್ತೀಚೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದು, ಅವರ ಪರ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರಂಜಾ ಲಿಫ್ಟ್ ಇರಿಗೇಷನ್, ಕಾರಂಜಾ ಸಂತ್ರಸ್ತ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರುವ ಹದಿನೈದನೆಯ ವಿಧಾನಸಭೆಯ ಹನ್ನೆರಡನೆಯ ಅಧಿವೇಶನದ ಮಂಗಳವಾರ ನಡೆದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಯ ಪರವಾಗಿ ಧ್ವನಿ ಎತ್ತಿದ ಶಾಸಕ ವೆಂಕಟರಾವ್ ನಾಡಗೌಡ, ಕಾರಂಜಾ ಲಿಫ್ಟ್ ಇರಿಗೇಷನ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಮತ್ತು ಕಾರಂಜಾ ಸಂತ್ರಸ್ತ ರೈತರ ಪರಿಹಾರದ ವಿಷಯವಾಗಿ ಸರ್ಕಾರದ ಗಮನ ಸೆಳೆದರು.

1993-94ರಲ್ಲಿ ಈ ಯೋಜನೆ ಪ್ರಾರಂಭವಾಗಿದೆ. 2017-18ರಲ್ಲಿ ದುರಸ್ತಿಗೆ ಹಣ ಒದಗಿಸಿದ್ದಾರೆ. ಹದಿನೆಂಟು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂಬ ಕರಾರು ಮಾಡಲಾಗಿತ್ತು. ಆದರೇ ಇಲ್ಲಿಯವರೆಗೆ ಆ ಯೋಜನೆ ಪೂರ್ಣಗೊಂಡಿಲ್ಲ. ಅದಕ್ಕೆ ಕಾರಣ ಏನು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಹಾಗೆಯೇ ಕಾರಂಜಾ ಯೋಜನೆಯ ವ್ಯಾಪ್ತಿಯ ಸುತ್ತಮುತ್ತಲಿನ ರೈತರ ಹೆಚ್ಚುವರಿ ಜಮೀನುಗಳಲ್ಲಿ ನೀರು ನಿಂತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿಲ್ಲ. ಕೂಡಲೇ ಬೆಳೆ ಹಾನಿ ಪರಿಹಾರ ಒದಗಿಸಬೇಕು. ಹಾಗೆಯೇ ಕಾರಂಜಾ ಸಂತ್ರಸ್ತ ರೈತರಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂದು ಸರ್ಕಾರವನ್ನು ಶಾಸಕ ವೆಂಕಟರಾವ್ ನಾಡಗೌಡರವರು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಹುಮನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ್ ರವರು, ನನ್ನ ಕ್ಷೇತ್ರ ವ್ಯಾಪ್ತಿಯ ಡಾಕುಳಗಿ ಗ್ರಾಮ ಕಾರಂಜಾ ಯೋಜನೆಯಿಂದ ಮುಳುಗಡೆಯಾಗಿದೆ. ಸುಮಾರು ತೊಂಬತ್ತೇಳು ಮನೆಗಳನ್ನು ಸ್ಥಳಾಂತರ ಮಾಡಬೇಕಾಗಿದೆ. ಬೋತಗಿ ಸೇರಿದಂತೆ ಕೆಲವು ಗ್ರಾಮಗಳಿಗೆ ಸಾಕಷ್ಟು ನೀರು ಬರುತ್ತಿದೆ. ಆದಷ್ಟು ಬೇಗ ಪರಿಹಾರ ಒದಗಿಸಿಕೊಡಬೇಕು.

ಕಾರಂಜಾ ಸಂತ್ರಸ್ತ ರೈತರು ಸುಮಾರು ದಿನಗಳಿಂದ ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯ ಎದುರುಗಡೆ ಧರಣಿ ಕುಳಿತಿದ್ದಾರೆ. ಕಾರಂಜಾ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂಬುದು ಅವರ ಬೇಡಿಕೆಯಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕೂಡಲೇ ಪರಿಹಾರ ಒದಗಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಗೋವಿಂದ್ ಕಾರಜೋಳರವರು, ಈ ಹಿಂದೆ ಶಹಾಬಾದ್ ಕಲ್ಲುಗಳಿಂದ ಕಾಲುವೆ ಮಾಡಲಾಗಿತ್ತು. ಅದು ದುರಸ್ತಿಗೆ ಬಂದಿತ್ತು. ಈಗಾಗಲೇ ಇಪ್ಪತ್ತೊಂದು ಕಿಲೋಮೀಟರ್ ಕಾಲುವೆ ದುರಸ್ತಿ ಮಾಡಲಾಗಿದೆ. ಇನ್ನೂಳಿದ ಕೆಲಸವನ್ನು ಆದಷ್ಟು ಬೇಗ ಮಾಡಲಾಗುತ್ತದೆ. ಕಾರಂಜಾ ಲಿಫ್ಟ್ ಇರಿಗೇಷನ್ ಮತ್ತು ಕಾರಂಜಾ ಸಂತ್ರಸ್ತ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು, ಮುಂದಿನ ಕ್ರಮಕೈಗೊಳ್ಳುತ್ತೇವೆಂದು ಸಚಿವ ಗೋವಿಂದ ಕಾರಜೋಳರವರು ಉತ್ತರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!