ದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯ ನದಿಗಳಲ್ಲಿ ಶೇಖರಣೆಯಾಗಿರುವ ಮರಳನ್ನು ತೆಗೆದು ಹರಾಜು ಹಾಕುವ ಮೂಲಕ ಸರ್ಕಾರ ತನ್ನ ಆದಾಯವನ್ನು ಕ್ರೋಢೀಕರಿಸಿಕೊಳ್ಳುವುದರ ಜೊತೆಗೆ ನದಿ ತೀರದ ನಿವಾಸಿಗಳು ಹಾಗೂ ರೈತರು ಪ್ರವಾಹದಿಂದ ನಷ್ಟ ಅನುಭವಿಸುವುದನ್ನು ತಪ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಅತಿವೃಷ್ಟಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.
ಕಾವೇರಿ, ಹಾರಂಗಿ ಸೇರಿದಂತೆ ಜಿಲ್ಲೆಯ ಉಪನದಿಗಳು ಹರಿಯುವ ಪ್ರದೇಶದಲ್ಲಿ ಮರಳು ಮತ್ತು ಹೂಳು ತುಂಬಿದೆ. ಅತಿ ಮಳೆಯಾದಾಗ ನದಿ ತೀರದ ಪ್ರದೇಶಗಳಲ್ಲಿ ಮರಳು ಆವರಿಸಿಕೊಳ್ಳುತ್ತಿದೆ. ಇದರಿಂದ ಗದ್ದೆ, ತೋಟ ಮತ್ತು ಮನೆಗಳಿಗೆ ಹಾನಿಯಾಗುತ್ತಿದೆ. ಈ ಘಟನೆಗಳು ನನ್ನ ಮನೆಯ ಬಳಿಯೇ ನಡೆದಿದೆ. ದಕ್ಷಿಣ ಕೊಡಗಿನಲ್ಲೂ ಇದೇ ಸಮಸ್ಯೆ ಕಾಡುತ್ತಿದೆ. ನದಿಯಲ್ಲಿ ತುಂಬಿರುವ ಮರಳು ಮತ್ತು ಹೂಳನ್ನು ತೆಗೆದರೆ ಸರಾಗವಾಗಿ ನೀರು ಹರಿದು ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಆದರೆ ಕೊಡಗು ಜಿಲ್ಲೆಯ ನದಿಗಳಿಂದ ಮರಳನ್ನು ತೆಗೆಯಲು ಅವಕಾಶ ನೀಡುತ್ತಿಲ್ಲವೆಂದು ವೀಣಾ ಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಮರಳು ತೆಗೆದು ಹರಾಜು ಹಾಕಿದರೆ ಸರ್ಕಾರಕ್ಕೆ ಕೂಡ ಆದಾಯ ಬರುತ್ತದೆ, ನದಿ ತೀರದ ಜನರ ಆತಂಕವೂ ದೂರವಾಗುತ್ತದೆ ಎಂದರು.
ಇದೊಂದು ಉತ್ತಮ ಸಲಹೆ ಎಂದು ವಿಧಾನ ಪರಿಷತ್ ಸಭಾಪತಿಗಳು ಧ್ವನಿಗೂಡಿಸಿದರು.
ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ಟೆಂಡರ್ ಪ್ರಕ್ರಿಯೆಯಲ್ಲಿರುವ ರೂ.130 ಕೋಟಿ ಅಂದಾಜು ಮೊತ್ತದ ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಗೆ ಪ್ರಸಕ್ತ ಸಾಲಿನ ಕಾರ್ಯಕ್ರಮ ಪಟ್ಟಿಯಲ್ಲಿ ರೂ.25 ಕೋಟಿಗಳ ಅನುದಾನವನ್ನು ಒದಗಿಸಲಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಕಾವೇರಿ ಮತ್ತು ಹಾರಂಗಿ ನದಿಗಳು ಇದ್ದು, ಅವುಗಳಲ್ಲಿ ಕುಶಾಲನಗರದ ಬಳಿ ಕಾವೇರಿ ನದಿ ಪಾತ್ರದಲ್ಲಿ ಎರಡು ಸ್ಥಳಗಳಲ್ಲಿ (ರೀಚ್ಗಳಲ್ಲಿ) ಹೂಳನ್ನು ತೆಗೆಯಲಾಗಿದೆ. 2020-21 ನೇ ಸಾಲಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಕುಶಾಲನಗರದ ಕೊಪ್ಪ ಸೇತುವೆ ಬಳಿ ನೀರಿನ ಹರಿವಿಗೆ ಅಡಚಣೆಯಾಗಿದ್ದ 4300 ಮೀ. ಉದ್ದಕ್ಕೆ ಹಾಗೂ ತಪೋವನದ ಬಳಿ 2000 ಮೀ.ಉದ್ದಕ್ಕೆ ಜೊಂಡು ಹಾಗೂ ಮಣ್ಣು ಮಿಶ್ರಿತ ಹೂಳು ತೆಗೆಯುವ ಕಾಮಗಾರಿಯನ್ನು ರೂ.87.92 ಲಕ್ಷದಲ್ಲಿ 2020-21ನೇ ಸಾಲಿನಲ್ಲಿ ಕೈಗೊಂಡು ಭೌತಿಕವಾಗಿ ಪೂರ್ಣಗೊಳಿಸಲಾಗಿದೆ.
ಕಾವೇರಿ ನದಿಯ ಉಗಮಸ್ಥಾನ ಭಾಗಮಂಡಲದಿಂದ ನದಿಯ ನೀರಿನ ಹರಿವಿಗೆ ಅಡಚಣೆಯಾಗಿರುವ ಗಿಡಗಂಟಿಗಳು ಮತ್ತು ಜೊಂಡನ್ನು ತೆಗೆಯಲು ಕಾವೇರಿ ನದಿಯ 11.50 ಕಿ.ಮೀ ಮತ್ತು ಉಪನದಿ ಕನ್ನಿಕೆಯ 6.20 ಕಿ.ಮೀ ಮತ್ತು ಇತರ ಉಪನದಿಗಳ 12.00 ಕಿ.ಮೀ ಉದ್ದಕ್ಕೆ ಸರಾಸರಿ 10 ರಿಂದ 50 ಮೀ ಅಗಲದವರೆಗೆ ತೆರವುಗೊಳಿಸುವ ಕಾಮಗಾರಿಯನ್ನು ರೂ.79.18 ಲಕ್ಷದೊಂದಿಗೆ 2020- 21ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದಲ್ಲಿ ಕೈಗೊಂಡು ಭೌತಿಕವಾಗಿ ಪೂರ್ಣಗೊಳಿಸಲಾಗಿದೆ.
ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯ ರೂ.130.00 ಕೋಟಿಗಳ ಯೋಜನಾ ವರದಿಗೆ 2020ರ ಜ.19 ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ನದಿಯಿಂದ ಮರಳು ತೆಗೆಯುವ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.