Wednesday, August 10, 2022

Latest Posts

ಮೋಬಿಯಸ್ ಫೌಂಡೇಷನ್‌ ನಿಂದ ಸರ್ಕಾರಿ ಆಸ್ಪತ್ರೆಗೆ 10 ಆಮ್ಲಜನಕ ಸಾಂದ್ರಕ ಕೊಡುಗೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಸೋಮವಾರಪೇಟೆ:

ಮೋಬಿಯಸ್ ಫೌಂಡೇಷನ್‌ ವತಿಯಿಂದ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ 10 ಆಮ್ಲಜನಕ ಸಾಂದ್ರಕಗಳನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಮೂಲಕ ಸಾರ್ವಜನಿಕ ಸೇವೆಗೆ ಒದಗಿಸಲಾಯಿತು.
10.50 ಲಕ್ಷ ರೂ. ವೆಚ್ಚದ 10 ಆಕ್ಸಿಜನ್ ಸಾಂದ್ರಕಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದ ಶಾಸಕ ರಂಜನ್, ಮೋಬಿಯಸ್ ಫೌಂಡೇಷನ್ ಮೂಲಕ ಅರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಶ್ಲಾಘನೀಯ. ಕೊರೋನಾ 3ನೇ ಅಲೆಯ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡಿದ್ದು, ಇಂತಹ ಸನ್ನಿವೇಶದಲ್ಲಿ ಮೋಬಿಯಸ್ ಮೂಲಕ ತಲಾ 1.10ಲಕ್ಷ ವೆಚ್ಚದಂತೆ ಆಮ್ಲಜನಕ ಸಾಂದ್ರಕಗಳನ್ನು ನೀಡಿರುವುದು ಮಾದರಿಯಾಗಿದೆ ಎಂದರು.
ಫೌಂಡೇಷನ್‌ನಿಂದ ಹೊಸ್ಕೇರಿ ಗ್ರಾಮ ವ್ಯಾಪ್ತಿಯಲ್ಲಿ ಇಂಟರ್‌ನ್ಯಾಷನಲ್ ಸ್ಕೂಲ್ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ. ಯಾವುದೇ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮ ಶೈಕ್ಷಣಿಕ ಕೇಂದ್ರಗಳೂ ಅಗತ್ಯ. ಶಾಲೆ ನಿರ್ಮಾಣವಾದರೆ ಸ್ಥಳೀಯವಾಗಿಯೇ ಉತ್ತಮ ವಿದ್ಯಾಭ್ಯಾಸ ಲಭಿಸುವುದರೊಂದಿಗೆ, ಉದ್ಯೋಗ ಸೃಷ್ಟಿಯೂ ಆಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ರಂಜನ್ ಅಭಿಪ್ರಾಯಿಸಿದರು.
ಮೋಬಿಯಸ್ ಫೌಂಡೇಷನ್‌ನ ಯೋಜನಾ ಸಂಯೋಜಕ ಮಧು ಬೋಪಣ್ಣ ಮಾತನಾಡಿ, ಸಂಸ್ಥೆಯ ವತಿಯಿಂದ ಈಗಾಗಲೇ ಇಸ್ರೇಲ್‌ನಿಂದ ತರಿಸಲಾದ 15 ಆಮ್ಲಜನಕ ಸಾಂದ್ರಕಗಳ ಪೈಕಿ ಸೋಮವಾರಪೇಟೆಗೆ 10 ಹಾಗೂ ಶನಿವಾರಸಂತೆಗೆ 5 ಘಟಕ ನೀಡಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜಕನ ಉತ್ಪಾದನಾ ಘಟಕ ನಿರ್ಮಾಣಕ್ಕೂ ಯೋಜನೆ ಸಿದ್ಧಪಡಿಸಲಾಗಿದೆ.ಇದರೊಂದಿಗೆ ಹೊಸ್ಕೇರಿ ಗ್ರಾಮದಲ್ಲಿ ಪರಿಸರ ಸ್ನೇಹಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ಈ ಸಂದರ್ಭ ಸರ್ಕಾರಿ ಆಸ್ಪತ್ರೆಯ ವೈದ್ಯ ಸತೀಶ್‌ಕುಮಾರ್, ತಾ.ಪಂ. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರಾದ ಎಸ್.ಆರ್. ಸೋಮೇಶ್, ಶರತ್‌ಚಂದ್ರ, ನೇಗಳ್ಳೆ ಜೀವನ್, ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss