ಯುಪಿ ಪರಿಷತ್​ ಚುನಾವಣೆ: ಗೆದ್ದು ಬೀಗಿದ ಬಿಜೆಪಿ, ಮೋದಿ ಅಭಿನಂದನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಪರಿಷತ್​ ಚುನಾವಣೆಯಲ್ಲೂ ಗೆದ್ದು ಬೀಗಿದೆ.

36 ಸ್ಥಾನಗಳ ಪೈಕಿ ಬಿಜೆಪಿ 33ರಲ್ಲಿ ಗೆಲುವು ಪಡೆದಿದೆ. ಪ್ರತಿಪಕ್ಷ ಎಸ್‌ಪಿ ಯಾವುದೇ ಸ್ಥಾನಗಳಲ್ಲೂ ಗೆಲುವು ಸಾಧಿಸದೆ ಮುಖಭಂಗ ಅನುಭವಿಸಿದೆ.

36 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದಂತೆ ಚುನಾವಣೆ ಸಂದರ್ಭದಲ್ಲಿ ಬುದೌನ್, ಹರ್ದೋಯ್, ಖೇರಿ, ಮಿರ್ಜಾಪುರ್-ಸೋನ್‌ಭದ್ರ, ಬಂದಾ-ಹಮೀರ್‌ಪುರ್, ಅಲಿಗಢ್, ಬುಲಂದ್‌ಶಹರ್​ನಲ್ಲಿ ಗೆಲುವಿನ ನಗೆ ಬೀರಿದೆ.

100 ಪರಿಷತ್​ ಸದಸ್ಯರ ಪೈಕಿ ಬಿಜೆಪಿ 35 ಸ್ಥಾನ ಪಡೆದುಕೊಂಡಿತ್ತು. ಇದೀಗ ಅದರ ಸ್ಥಾನ 44ಕ್ಕೆ ಏರಿಕೆಯಾಗಿದೆ. ಆದರೆ, ಬಹುಮತಕ್ಕೆ ಏಳು ಸ್ಥಾನ ಕಡಿಮೆ ಇದೆ. ಸಮಾಜವಾದಿ ಪಕ್ಷ 17 ಸದಸ್ಯರನ್ನು ಹೊಂದಿದ್ದು, ಬಿಎಸ್​ಪಿ ನಾಲ್ಕು, ಕಾಂಗ್ರೆಸ್​​ ಮತ್ತು ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾದಳ, ನಿಶಾದ್​ ಪಕ್ಷ ತಲಾ ಓರ್ವ ಸದಸ್ಯರನ್ನ ಹೊಂದಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ, ಉತ್ತರ ಪ್ರದೇಶ ಜನರು ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿ. ನಮ್ಮ ಪಕ್ಷ ವಿಧಾನಸಭೆ ಮತ್ತು ವಿಧಾನಪರಿಷತ್​​ನಲ್ಲೂ ಭರ್ಜರಿ ಗೆಲುವು ದಾಖಲು ಮಾಡಿದ್ದು, ಇದೀಗ ರಾಜ್ಯದ ಜನರ ಕಲ್ಯಾಣ, ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಹಕಾರಿಯಾಗಿದೆ ಎಂದಿದ್ದಾರೆ.

ಎಂಎಲ್​ಸಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ಗೆಲುವು ಬಿಜೆಪಿ ಅಭಿವೃದ್ಧಿಗೆ ಪೂರಕವಾಗಿದೆ. ಯೋಗಿ ಆದಿತ್ಯನಾಥ್​ ಸರ್ಕಾರ ಹಾಗೂ ಪಕ್ಷ ಸಂಘಟನೆಯಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!