ಜಪಾನ್​​ನಲ್ಲಿ ಮೋದಿ । ಭಾರತೀಯರ ಮಾತೃಭೂಮಿ ಮೇಲಿನ ಪ್ರೀತಿ ಎಂದಿಗೂ ಮರೆಯಾಗುವುದಿಲ್ಲ: ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಮತ್ತು ಜಪಾನ್ ‘ನೈಸರ್ಗಿಕ ಪಾಲುದಾರರು’. ಈ ಸಂಬಂಧವು ಅನ್ಯೋನ್ಯತೆ,ಆಧ್ಯಾತ್ಮಿಕತೆ, ಸಹಕಾರ ಮತ್ತು ಒಗ್ಗೂಡಿವಿಕೆಯಿಂದ ಕೂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಆಯೋಜನೆಗೊಂಡಿದ್ದ ಇಂಡೋ – ಪೆಸಿಫಿಕ್​​ ಎಕನಾಮಿಕ್​​ ಫ್ರೇಮ್​​ವರ್ಕ್​ ಫಾರ್​ ಪ್ರಾಸ್ಪೆರಿಟಿ(IPEF)ನಲ್ಲಿ ಭಾಗಿಯಾಗಿ ಮಾತನಾಡಿದರು.

ಭಾರತೀಯರು ನಮ್ಮ ಕರ್ಮಭೂಮಿಯೊಂದಿಗೆ ಹೃದಯಸಂಬಂಧವನ್ನಿಟ್ಟುಕೊಂಡಿರುತ್ತಾರೆ. ಆದರೆ ನಮ್ಮ ಮಾತೃಭೂಮಿ ಮೇಲಿನ ಪ್ರೀತಿ ಎಂದಿಗೂ ಮರೆಯಾಗುವುದಿಲ್ಲ. ನಾವು ನಮ್ಮ ಮಾತೃಭೂಮಿಯಿಂದ ದೂರವಿರಲು ಸಾಧ್ಯವಿಲ್ಲ. ಇದು ನಮ್ಮ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ ಎಂದರು.

ಭಾರತ ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್​ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದರು. ಶಾಂತಿ, ಸಮೃದ್ಧಿ ಗುರಿ ಸಾಧಿಸುವ ಉದ್ದೇಶದಿಂದ ಪಾಲುದಾರರ ನಡುವೆ ಉತ್ತಮ ಸಂಬಂಧ ಹೊಂದುವುದಾಗಿ ಹೇಳಿಕೊಂಡಿದ್ದಾರೆ.ಇಂಡೋ-ಪೆಸಿಫಿಕ್​​ ಎಕನಾಮಿಕ್​​ ಫ್ರೇಮ್​​ವರ್ಕ್​ ಫಾರ್​ ಪ್ರಾಸ್ಪೆರಿಟಿ ಅಡಿ ಪಾಲುದಾರ ರಾಷ್ಟ್ರಗಳೊಂದಿಗೆ ಭಾರತ ಸಹಕಾರದೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ ಎಂದರು.

ಭಾರತ – ಜಪಾನ್​ ನಡುವಿನ ಸಂಬಂಧದ ಬಗ್ಗೆ ಹಾಡಿಹೊಗಳಿದ ನಮೋ, ಸ್ವಾಮಿ ವಿವೇಕಾನಂದರು ಚಿಕಾಗೋಗೆ ತೆರಳುವ ಮೊದಲು ಜಪಾನ್​ಗೆ ಭೇಟಿ ನೀಡಿದ್ದರು. ಜೀವನದಲ್ಲಿ ಒಮ್ಮೆಯಾದರೂ ಜಪಾನ್​ಗೆ ಭೇಟಿ ನೀಡಬೇಕೆಂದು ಅವರು ಹೇಳಿದ್ದರು ಎಂದರು.

ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಜಪಾನ್ ಪಾಲು ಬಹಳ ಮಹತ್ವದ್ದಾಗಿದೆ. ನಾನು ಜಪಾನ್​ಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಗುತ್ತದೆ. ಭಾರತದ ಅನೇಕರು ಜಪಾನ್​​ನಲ್ಲಿ ಉಳಿದುಕೊಂಡು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡಿದ್ದೀರಿ. ಆದರೂ, ಭಾರತದ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಹೆಮ್ಮೆಯ ವಿಚಾರ ಎಂದರು.

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು, ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅಥವಾ ಮೀಸಲಾದ ಸರಕು ಸಾಗಣೆ ಕಾರಿಡಾರ್ ಆಗಿರಲಿ, ಇವು ಭಾರತ-ಜಪಾನ್ ಸಹಕಾರಕ್ಕೆ ಉತ್ತಮ ಉದಾಹರಣೆಗಳಾಗಿವೆ. ಇಂದು, ಭಾರತವು ತನ್ನ ಮೂಲಸೌಕರ್ಯ ಮತ್ತು ಸಾಮರ್ಥ್ಯದ ನಿರ್ಮಾಣವನ್ನು ಹೆಚ್ಚಿಸುವ ವೇಗ ಮತ್ತು ಪ್ರಮಾಣವನ್ನು ಜಗತ್ತು ಅರಿತುಕೊಳ್ಳುತ್ತಿದೆ. ನಮ್ಮ ಈ ಸಾಮರ್ಥ್ಯವನ್ನು ಬೆಳೆಸುವಲ್ಲಿ ಜಪಾನ್ ಪ್ರಮುಖ ಪಾಲುದಾರ ಎಂದು ಮೋದಿ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​, ಜಪಾನ್ ಪ್ರಧಾನಿ ಕಿಶಿದಾ ಫ್ಯೂಮಿಯೋ ಉಪಸ್ಥಿತರಿದ್ದರು. ಇದರ ಜೊತೆಗೆ ಐಪಿಇಎಫ್​​ ಪಾಲುದಾರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಬ್ರೂನಿ, ಇಂಡೋನೇಷ್ಯಾ, ರಿಪಬ್ಲಿಕ್ ಆಫ್ ಕೊರಿಯಾ, ಮಲೇಷ್ಯಾ, ನ್ಯೂಜಿಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂದ ಅನೇಕ ಅಧಿಕಾರಿಗಳು, ನಾಯಕರು ಹಾಜರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!