ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಶ್ವವನ್ನೇ ತಲ್ಲಣಿಸುವಂತೆ ಮಾಡಿದ ಕೊರೋನಾ ಸೋಂಕು ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಆರಂಭದಲ್ಲಿ ಭಾರೀ ಆತಂಕ ಸೃಷ್ಟಿಸಿದರೂ ಪ್ರಧಾನಿ ನರೇಂದ್ರ ಮೋದಿ ಸರಕಾರ ಕೈಗೊಂಡ ಕ್ರಮಗಳಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂಬುದಾಗಿ ಅಮೆರಿಕದ ವಿಜ್ಞಾನಿಯೊಬ್ಬರು ವಿಶ್ಲೇಷಿಸಿದ್ದು, ವಿಶ್ವದ ಗಮನಸೆಳೆದಿದೆ.
ವಿಶ್ವದ ಎರಡನೇ ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವ ಮತ್ತು ಭೌಗೋಳಿಕ , ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವ ದೇಶದಲ್ಲಿ ಇಂತಹ ಒಂದು ಪಿಡುಗನ್ನು ಭಾರತ ಸರಕಾರ ಹೇಗೆ ನಿಯಂತ್ರಣಕ್ಕೆ ತಂದಿತು ಎಂಬ ಪ್ರಶ್ನೆ ಮತ್ತು ಕುತೂಹಲ ವಿಶ್ವದಲ್ಲಿ ಮೂಡಿತ್ತಲ್ಲದೆ , ವಿಶ್ವಸಂಸ್ಥೆಯಲ್ಲದೆ ವಿಶ್ವದ ವಿವಿಧ ನಾಯಕರು, ವಿಜ್ಞಾನಿಗಳು ಮೋದಿ ಸರಕಾರವನ್ನು ಬಹುವಾಗಿ ಶ್ಲಾಘಿಸಿದ್ದರು.
ಈ ಬಗ್ಗೆ ಅಮೆರಿಕದ ಸಾಂಕ್ರಾಮಿಕ ರೋಗಗಳ ವಿಶ್ಲೇಷಕರಾಗಿರುವ ಪ್ರಮುಖ ವಿಜ್ಞಾನಿ ಯನೀರ್ ಬಾರ್ ಯಮ್ ಅವರು ವಿವರಿಸಿದ್ದು ಹೀಗೆ -ಕೊರೋನಾ ಸೋಂಕು ಆರಂಭಗೊಂಡ ತಕ್ಷಣ ಸರಕಾರ ನಗರಗಳತ್ತ ವಲಸೆಗೆ ನಿಯಂತ್ರಣ ವಿಸಿತು. ಬೆನ್ನಿಗೇ ಲಾಕ್ಡೌನ್ ಘೋಷಿಸಿ ಶಾಲೆ-ಕಾಲೇಜುಗಳನ್ನು ಬಂದ್ ಮಾಡಿ ಗುಂಪು ಸೇರುವಿಕೆಯನ್ನು ತಡೆಗಟ್ಟಲಾಯಿತು. ನಿರಂತರ ಜನರ ಜೊತೆ ಪ್ರಧಾನಿ ಮೋದಿಯವರ ಸಂವಾದ -ವಿದ್ಯಮಾನಗಳ ಬಗ್ಗೆ ಅರಿವು,ಮಾರ್ಗದರ್ಶನ, ಜಾಗೃತಿ ಮೂಡಿಸುವಿಕೆ, ಸೋಂಕಿತರ ತ್ವರಿತ ಪತ್ತೆ, ಅವರಿಗೆ ಚಿಕಿತ್ಸಾ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಯಿತು.
ಅಲ್ಲದೆ ಜನರಿಗೆ ಅಗತ್ಯವಿರುವ ಮಾಸ್ಕ್ಗಳು, ಆರೋಗ್ಯ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್ಗಳನ್ನು ಭಾರೀ ಪ್ರಮಾಣದಲ್ಲಿ ದೇಶದಲ್ಲೇ ಉತ್ಪಾದಿಸಿ ಕ್ಷಿಪ್ರ ಪೂರೈಕೆ, ದೇಶದಲ್ಲಿ ಕೇವಲ ಒಂದೇ ಇದ್ದ ಆರ್ಟಿಪಿಸಿಆರ್ ಪರೀಕ್ಷಾ ಕೇಂದ್ರಗಳನ್ನು 2300ಕ್ಕೇರಿಸಿದ್ದು, ಸೋಂಕಿಗೆ ತುತ್ತಾದವರನ್ನು ತ್ವರಿತವಾಗಿ ಪತ್ತೆಹಚ್ಚಿ ಕ್ವಾರಂಟೈನ್ಗೊಳಪಡಿಸಿದ್ದು, ಮಾಸ್ಕ್ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆಗಾಗಿ ಕಾಲರ್ಟ್ಯೂನ್ ಮೂಲಕ ಅರಿವು ಮೂಡಿಸುವ ಸಂದೇಶ, ಜನಸಂಚಾರ ನಿರ್ಬಂಧ ಕ್ರಮದಿಂದ ಸೋಂಕು ಹರಡುವಿಕೆಗೆ ತಡೆ, ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ಇತ್ಯಾದಿಗಳಿಂದ ಭಾರತವು ಕೋವಿಡ್-೧೯ಸೋಂಕು ನಿಯಂತ್ರಣವನ್ನು ಯಶಸ್ವಿಯಾಗಿ ಸಾಸಿದೆ ಎಂಬುದಾಗಿ ಅವರು ವಿಶ್ಲೇಷಿಸಿದ್ದಾರೆ.