ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೇರಳದಲ್ಲಿನ ಕೊಲ್ಲಿ ದೇಶದ ರಾಜತಾಂತ್ರಿಕ ಕಚೇರಿ ಅಧಿಕಾರಿಯೊಬ್ಬನ ವಿಳಾಸಕ್ಕೆ ಬಂದ ಸರಕಿನಿಂದ ಭಾರೀ ಪ್ರಮಾಣದಲ್ಲಿ ಚಿನ್ನ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಂಚುಕೋರ ಮುಹಮ್ಮದ್ ಮನ್ಸೂರ್ ಪಿ.ಎಚ್.ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಬುಧವಾರ ಬಂಧಿಸಿದೆ.
ಯುಎಇಯಿಂದ ಬಂದು ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಾಗ ಮನ್ಸೂರ್ನನ್ನು ಅಧಿಕಾರಿಗಳು ಬಂಧಿಸಿದರು ಎಂದು ಎನ್ಐಎ ವಕ್ತಾರರು ತಿಳಿಸಿದರು. 2020ರ ಜು.5ರಂದು ನಡೆದ ಈ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ 14.82ಕೋ.ರೂ. ಮೌಲ್ಯದ 30ಕಿಲೋ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.ಈ ಬಗ್ಗೆ ಜು.10ರಂದು ಪ್ರಕರಣ ದಾಖಲಾಗಿತ್ತು.ಅಲ್ಲದೆ ಜನವರಿಯಲ್ಲಿ 20ಮಂದಿ ವಿರುದ್ಧ ಆರೋಪಪಟ್ಟಿಯೂ ಸಲ್ಲಿಕೆಯಾಗಿತ್ತು.
ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ನಲ್ಲಿನ ರಾಜತಾಂತ್ರಿಕರ ವಿಳಾಸಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಭಾರತಕ್ಕೆ ಈ ಚಿನ್ನಕಳ್ಳಸಾಗಣೆ ನಡೆಯುತ್ತಿದ್ದು, ಮನ್ಸೂರ್ ಮೊಹಮ್ಮದ್ ಶಾಫಿ ಪಿ . ಮತ್ತು ಇತರರ ಜೊತೆಗೂಡಿ ಈ ಕಳ್ಳಸಾಗಣೆ ಸಂಚು ರೂಪಿಸಿದ್ದು ತನಿಖೆಯಿಂದ ವ್ಯಕ್ತವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ .ಮನ್ಸೂರ್ನ ವಿರುದ್ಧ ಎರ್ನಾಕುಳಂನ ಎನ್ಐಎ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.ಇದೀಗ ಆತನನ್ನು ಕೊಚ್ಚಿಯಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ೫ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ.