ದಿಗಂತ ವರದಿ ಬಾಣಾವರ:
ಎಟಿಎಂಗಳಿಗೆ ಹಣ ಸಾಗಿಸುವ ವಾಹನದಲ್ಲಿದ್ದ 42 ಲಕ್ಷ ರೂ. ದಿಢೀರ್ ಕಳ್ಳತನವಾಗಿರುವ ಘಟನೆ ಬುಧವಾರ ನಡೆದಿದೆ.
ಎಂದಿನಂತೆ ಎಟಿಎಂಗಳಿಗೆ ಹಣ ತುಂಬಿಸುವ ಸಿಎಂಎಸ್ ಖಾಸಗಿ ಸಂಸ್ಥೆಯ ವಾಹನ ಇಲ್ಲಿನ
ಸಾರಿಗೆ ಬಸ್ ನಿಲ್ದಾಣದ ಎದುರಿರುವ ಎಸ್ಬಿಐ ಬ್ಯಾಂಕ್ ಎಟಿಎಂಗೆ ಹಣ ಹಾಕಲು ಆಗಮಿಸಿತ್ತು. ಇದರಲ್ಲಿ ರುದ್ರೇಶ್ ಮತ್ತು ಭರತ್ ಎಂಬ ಸಿಬ್ಬಂದಿ ಎಟಿಎಂಗೆ ಹಣ ಹಾಕಲು ತೆರಳಿದ್ದರು. ಈ ವೇಳೆ ಚಾಲಕ ನಟೇಶ್ ವಾಹನದಲ್ಲೇ ಇದ್ದರು.
ದಿಢೀರ್ ಮಾಯ:
ಇಬ್ಬರು ಸಿಬ್ಬಂದಿ ಎಟಿಎಂಗೆ ಹಣ ತುಂಬಿ ವಾಹನದೊಳಗೆ ಬಂದು ನೋಡಿದಾಗ ೪೨ ಲಕ್ಷ ರೂ. ಇದ್ದ ಹಣದ ಬ್ಯಾಗ್ ಇಲ್ಲವಾಗಿತ್ತು. ಇದರಿಂದ ಆತಂಕಗೊಂಡ ಸಿಬ್ಬಂದಿ ಕೂಡಲೇ
ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾವು ಎಟಿಎಂಗೆ ತೆರಳುವ ಮುನ್ನ ಹಣವುಳ್ಳ ಬ್ಯಾಕ್ ವಾಹನದಲ್ಲೇ ಇತ್ತು. ಬಂದು ನೋಡುವಷ್ಟರಲ್ಲಿ ಬ್ಯಾಗ್ ಇರಲಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸಿಎಂಎಸ್ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿ ತನಿಖೆ ಚುರುಕುಗೊಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.