ಹೊಸದಿಗಂತ ವರದಿ, ಚಿತ್ರದುರ್ಗ
ಪೊಲೀಸರ ಹೆಸರಿನಲ್ಲಿ ಮೊಬೈಲ್ ಕರೆ ಮಾಡಿ ವೈದ್ಯರಿಂದ ೧.೨೭ ಕೋಟಿ ರೂ. ಹಣ ಲಪಟಾಯಿಸಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಸ್ಸಾಂ ರಾಜ್ಯದ ಶಿವಸಾಗರ್ ಜಿಲ್ಲೆಯ ಭಾನ್‌ಮುಖ್‌ಪತ್ತರ್ ಗ್ರಾಮದ ಪಬನ್ ಕುಮಾರ್ ಬೋರ್ ಪಾತ್ರಾ ಹಾಗೂ ಜಾಕೀರ್ ಬೋರಾ @ ಜಾಕೀರ್ ಆಲಂ ಬೋರಾ ಬಂಧಿತ ಆರೋಪಿಗಳು.
ಚಿತ್ರದುರ್ಗ ನಗರದ ಡಾ.ಶ್ರೀನಿವಾಸಶೆಟ್ಟಿ ಎಂಬುವರಿಗೆ ಮೊಬೈಲ್ ಕರೆ ಹಾಗೂ ವಾಟ್ಸಾಪ್ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಳು ಮುಂಬೈ ಪೊಲೀಸರು ಹಾಗೂ ಟ್ರಾಯ್ ಹೆಸರಿನಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡು ಬ್ಯಾಂಕ್ ಖಾತೆ ತೆರೆದು ಮನಿ ಲ್ಯಾಂಡರಿಂಗ್ ವಂಚನೆ ಮಾಡಿದ್ದರು. ಬ್ಯಾಂಕ್ ಖಾತೆಯಲ್ಲಿನ ಹಣ ಆಡಿಟ್ ಮಾಡುವುದಾಗಿ ನಂಬಿಸಿ ಹಣ ಲಪಟಾಯಿಸಿದ್ದರು.
ಹಣ ಕಳೆದುಕೊಂಡ ಡಾ.ಶ್ರೀನಿವಾಸಶೆಟ್ಟಿ ಈ ಕುರಿತು ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರು ಸಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅಸ್ಸಾಂ ರಾಜ್ಯಕ್ಕೆ ತೆರಳಿ ಈ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿವಿಧ ಖಾತೆಗಳಿಂದ ೧೬,೮೯,೦೦೦ ರೂ. ಫ್ರೀಜ್ ಮಾಡಲಾಗಿದೆ. ಮತ್ತಷ್ಟು ಹಣವನ್ನು ಫ್ರೀಜ್ ಮಾಡಿಸಿ ಪಿರ್ಯಾದಿಗೆ ಹಿಂದಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ವರದಿಯಾದ ಕೇವಲ ೧೫ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಸಿಇಎನ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಸಿದ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಬಂಡಾರು ಶ್ಲಾಘಿಸಿದ್ದಾರೆ.