Wednesday, August 17, 2022

Latest Posts

ಹುಲಿ ಸೆರೆ ಕಾರ್ಯಾಚರಣೆ ಹೆಸರಿನಲ್ಲಿ ಹಣ ಪೋಲು: ಮನು ಸೋಮಯ್ಯ

ಹೊಸದಿಗಂತ ವರದಿ, ಮಡಿಕೇರಿ:

ದಕ್ಷಿಣ ಕೊಡಗಿನಲ್ಲಿ ಜನ ಹಾಗೂ ಜಾನುವಾರುಗಳನ್ನು ಬಲಿ ತೆಗೆದುಕೊಂಡ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವಿಫಲವಾಗಿದ್ದು, ಆಪರೇಷನ್ ಟೈಗರ್ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯ ವಿರುದ್ಧ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯ ಸಂದರ್ಭ ಮಾತನಾಡಿದ ಅವರು, ಫೆ. 21 ರಿಂದ ಹುಲಿ ಕಾರ್ಯಾಚರಣೆ ಪ್ರಾರಂಭವಾಗಿದೆ. ಆದರೆ ಗ್ರಾಮಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಕಂಡು ಬರುತ್ತಿರುವ ಹುಲಿಗಳು ಅರಣ್ಯ ಅಧಿಕಾರಿಗಳಿಗೆ ಗೋಚರಿಸುತ್ತಿಲ್ಲ. 150 ಸಿಬ್ಬಂದಿ, ಆರು ಆನೆ ಹಾಗೂ ವೈದ್ಯಾಧಿಕಾರಿಗಳು ಸೇರಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದ್ದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಟೀಕಿಸಿದರಲ್ಲದೆ, ಕಾರ್ಯಾಚರಣೆಯ ಹೆಸರಿನಲ್ಲಿ ಜನಸಾಮಾನ್ಯರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಕುಟ್ಟ ಕೊಡವ ಸಮಾಜದಲ್ಲಿ ರೈತ ಸಂಘಟನೆ ನಡೆಸಿದ ಸಭೆಯೊಂದರಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹುಲಿ ಸೆರೆಗೆ ಯಾವುದೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.
ಪರಿಸರವನ್ನೇ ಪೂಜೆ ಮಾಡಿಕೊಂಡು ಬರುತ್ತಿರುವ ಕೊಡಗಿನ ನಿವಾಸಿಗಳು ಇಲ್ಲಿವರೆಗೆ ಕಾಡುಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದೇವೆ. ಪ್ರಾಣಿ ಪಕ್ಷಿಗಳನ್ನು ದೇವರಂತೆ ಕಾಣುತ್ತಿದ್ದೇವೆ. ಆದರೆ ಪ್ರಾಣಿಗಳಿಂದ ಮನಷ್ಯರಿಗೆ ತೊಂದರೆಯಾಗುತ್ತಿರುವುದು ವಿಷಾದನೀಯ ಎಂದರು.
ಜಿಲ್ಲೆಯಲ್ಲಿ ಜನತೆ ಪ್ರಾಕೃತಿಕ ವಿಕೋಪ, ಕಾಡಾನೆ ದಾಳಿ, ಕಾಡು ಪ್ರಾಣಿಗಳ ಹಾವಳಿ, ಬೆಳೆ ನಾಶ, ಅಕಾಲಿಕ ಮಳೆ ಸೇರಿದಂತೆ ಹುಲಿ ದಾಳಿಯಿಂದಾಗಿ ನಿರಂತರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಬಂದು ಕೊಡಗಿನ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿಲ್ಲ. ಕೂಡಲೇ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರಕಾರದ ಭಿಕ್ಷೆ: ತಮ್ಮ ಜೀವನೋಪಯಕ್ಕಾಗಿ ಕೃಷಿಕರು ಹಸುಗಳನ್ನು ಸಾಕಿದ್ದಾರೆ. ಆದರೆ ನಿರಂತರ ಹುಲಿ ದಾಳಿ ನಡೆಸಿ ಹಸುಗಳನ್ನು ಕೊಲ್ಲುತ್ತಿದ್ದು, ಸರ್ಕಾರ ಭಿಕ್ಷೆಯ ರೂಪದಲ್ಲಿ ರೂ. 10 ಸಾವಿರ ಪರಿಹಾವಾಗಿ ನೀಡಿ ಸುಮ್ಮನಾಗುವ ಬದಲು ಮತ್ತೊಂದು ಹಸುವನ್ನು ನೀಡಿದಲ್ಲಿ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದರ ವಿರುದ್ಧ ಕಿಡಿ: ಕೊಡಗಿನ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಮೈಸೂರಿಗೆ ಮಾತ್ರ ಸಿಮೀತರಾಗಿರುವ ಸಂಸದ ಪ್ರತಾಪ್ ಸಿಂಹ ಕೊಡಗು ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ ಎಂದು ಮನು ಸೋಮಯ್ಯ ಆರೋಪಿಸಿದರು. ಕೇಂದ್ರದಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಬೇಕು, ತೋಟಗಳಲ್ಲಿರುವ ಕಾಡಾನೆಗಳನ್ನು ತಕ್ಷಣವೇ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು, ಆನೆ, ಹುಲಿ ಸಂತತಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಅರಣ್ಯದಿಂದ ನಾಡಿಗೆ ಬರುತ್ತಿರುವ ವನ್ಯ ಜೀವಿಗಳನ್ನು ಹ್ಯಾಗಿಂಗ್ ಸೋಲಾರ್ ತಂತಿ ಅಥವಾ ರೈಲ್ವೆ ಬ್ಯಾರಿಕೇಡ್ ಅಥವಾ ಕಂದಕ ನಿರ್ಮಿಸಬೇಕು, ಶಾಲಾ ವಿದ್ಯಾರ್ಥಿಗಳು, ತೋಟ ಕಾರ್ಮಿಕರು ಮತ್ತು ಇತರ ಸಾರ್ವಜನಿಕರು ತಮ್ಮ ಕಾರ್ಯಕ್ಕಾಗಿ ಓಡಾಡಲು ಭಯಭೀತರಾಗಿದ್ದು, ಇಲಾಖೆಯಿಂದ ಸಾರಿಗೆ ವ್ಯವಸ್ಥೆ ಮತ್ತು ಮನೆಗಳಿಗೆ ಗನ್‍ಮೆನ್ ವ್ಯವಸ್ಥೆಯನ್ನು ಕಲ್ಪಿಸಬೇಕು ಒತ್ತಾಯಿಸಿದರು.
50ಲಕ್ಷ ರೂ. ಪರಿಹಾರಕ್ಕೆ ಒತ್ತಾಯ: ಪ್ರಾಣಿಗಳಿಂದ ಮೃತಪಟ್ಟ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು, ರೈತರ ಹಸುಗಳು ವನ್ಯ ಜೀವಿಗಳಿಂದ ಮೃತಪಟ್ಟಲ್ಲಿ ಅವರಿಗೆ ಕೊಡುತ್ತಿದ್ದ ಪರಿಹಾರವನ್ನು ಐದು ಪಟ್ಟು ಹೆಚ್ಚಿಸಬೇಕು ಮತ್ತು ಸ್ಥಳದಲ್ಲೇ ಕೊಡುವಂತಾಗಬೇಕು, ಕಾಡು ಪ್ರಾಣಿಗಳಿಗೆ ಅರಣ್ಯದೊಳಗೆ ನೀರು ಆಹಾರವನ್ನು ಶಾಶ್ವತವಾಗಿ ಕೊಡುವ ಯೋಜನೆಗಳನ್ನು ಕೈಗೊಳ್ಳಬೇಕು, ವನ್ಯ ಜೀವಿಗಳಿಂದ ಮಾನವ ಪ್ರಾಣ ಕಳೆದುಕೊಂಡ ಸಂದರ್ಭ ಕೆಎಸ್‍ಆರ್‍ಟಿಸಿ ಮಾದರಿಯ ವಿಮೆ ಪರಿಹಾರವನ್ನು ಅರಣ್ಯ ಇಲಾಖೆ ಸಹ ಅಳವಡಿಸಬೇಕೆಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!