ವಿರಕ್ತ ಮಠಕ್ಕೆ ಸ್ವಾಮೀಜಿ ನೇಮಕಕ್ಕೆ ತಿಂಗಳ ಗಡುವು: ವೀರಶೈವ ಸಮಾಜ

ಹೊಸದಿಗಂತ ವರದಿ ಸೋಮವಾರಪೇಟೆ:
ಸೋಮವಾರಪೇಟೆಯ ವಿರಕ್ತ ಮಠಕ್ಕೆ ತಕ್ಷಣವೇ ಮಠಾಧಿಪತಿಯವರನ್ನು‌ ನೇಮಿಸುವುದರೊಂದಿಗೆ‌ ಮಠದ ಅಧಿವೃದ್ಧಿಯಾಗಬೇಕು.ಒಂದು ವೇಳೆ ಮುಂದಿನ ಒಂದು‌ ತಿಂಗಳೊಳಗೆ ಮಠಾಧಿಪತಿಯವರನ್ನು ನೇಮಿಸದಿದ್ದಲ್ಲಿ ಸಮಾಜದ ವತಿಯಿಂದಲೇ‌ ಸ್ವಾಮೀಜಿಯವರನ್ನು ನೇಮಿಸುವುದಾಗಿ ಸೋಮವಾರಪೇಟೆ‌ ವೀರಶೈವ ಸಮಾಜ ಎಚ್ಚರಿಸಿದೆ.

ಮಠಕ್ಕೆ ಸ್ವಾಮೀಜಿಯವರನ್ನು ನೇಮಿಸದಿರುವ ಬಗ್ಗೆ ಹಾಗೂ ಮಠದ ಅಭಿವೃದ್ಧಿಯ ಬಗ್ಗೆ ಯಾರೊಬ್ಬರೂ ಗಮನಹರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಮಾಜದ ಪ್ರಮುಖರು,‌ ಈ ಸಂಬಂಧ ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಪೀಠಾಧ್ಯಕ್ಷ ಶ್ರೀ ಬಸವಪ್ರಭು ಸ್ವಾಮೀಜಿಯವರ ಗಮನಸೆಳೆದು ಗಡುವು ನೀಡಿದೆ.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ವಿರಕ್ತಮಠ, ವೀರಶೈವ ಸಮಾಜ,ಅಕ್ಕನಬಳಗ ಹಾಗೂ ಬಸವೇಶ್ವರ ಯುವಕದ ಸಂಯುಕ್ತ ಆಶ್ರಯದಲ್ಲಿ ನಡೆದ ಲಿಂಗೈಕ್ಯ ವಿಶ್ವೇಶ್ವರ ಸ್ವಾಮೀಜಿಯ ಮೂರನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈ ಆಗ್ರಹ ಕೇಳಿ ಬಂದಿದೆ.
ಕಳೆದ ಮೂರು ವರ್ಷಗಳಿಂದ ಮಠಕ್ಕೆ ಸ್ವಾಮೀಜಿ ಇಲ್ಲ, ಮಠದ ಕಟ್ಟಡದ ಕೆಲವು ಭಾಗ ಕುಸಿಯುತ್ತಿದೆ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಮುಂದಿನ ಒಂದು ತಿಂಗಳೊಳಗೆ ಒಬ್ಬ ಸ್ವಾಮೀಜಿಯನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಸಮಾಜದ ವತಿಯಿಂದಲೇ ಸ್ವಾಮೀಜಿಯನ್ನು ನೇಮಕ ಮಾಡಿ ಕೊಳ್ಳುತ್ತೇವೆ ಎಂದು ಸಮಾಜದ ಮುಖಂಡರು ಬಸವಪ್ರಭು ಸ್ವಾಮೀಜಿಯವರಿಗೆ ತಾಕೀತು ಮಾಡಿದರು.

ಈ ಸಂದರ್ಭ ಮಾತನಾಡಿದ ಬಸವಪ್ರಭು ಸ್ವಾಮೀಜಿ ನಮ್ಮ ಎಲ್ಲಾ ಶಾಖಾ ಮಠದ ಸ್ವಾಮೀಜಿ ಗಳೊಡನೆ ಹಾಗೂ ಬೃಹನ್ಮಠದ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ಸ್ವಾಮೀಜಿಯನ್ನು ನೇಮಿಸಲಾಗುವುದು ಹಾಗೂ ಮಠದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದೆಂದರು.
ಮಠ ಮಾನ್ಯಗಳು ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ಮಾಡಿದಾಗ ಸಮಾಜದ ಅಭಿವೃದ್ದಿ ಸಾಧ್ಯವೆಂದ ಅವರು, ನೂರಾರು ವರ್ಷಗಳ ಇತಿಹಾಸವಿರುವ ಈ ವಿರಕ್ತ ಮಠದಲ್ಲಿ ಲಿಂಗೈಕ್ಯ ವಿಶ್ವೇಶ್ವರ ಸ್ವಾಮೀಜಿ ತಮ್ಮ ಕಷ್ಟಗಳ ನಡುವೆಯೂ ಸೇವೆ ಸಲ್ಲಿಸಿದ್ದಾರೆ ಅದನ್ನು ನಾವು ಸ್ಮರಿಸಲೇ ಬೇಕೆಂದರು.
ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ರಾವಂದೂರು ಮಠಾಧೀಶ ಮೋಕ್ಷಪತಿ ಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೊಡ್ಲಿಪೇಟೆ ಕಲ್ಲು ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣ ತೊಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಚಿಕ್ಕಬಳ್ಳಾಪುರದ‌ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ಮನೆ ಹಳ್ಳಿ ಮಠದ ಮಹಾಂತಶಿವಲಿಂಗ ಸ್ವಾಮೀಜಿ, ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ಅಕ್ಕನಬಳಗದ ಅಧ್ಯಕ್ಷೆ ಜಲಜಾ ಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಮರಣೋತ್ಸವದ ಅಂಗವಾಗಿ ಬೆಳಗ್ಗೆ ಶ್ರೀಗಳ ಗದ್ದುಗೆಗೆ ಅರ್ಚಕರಾದ ವಿನೀತ್ ಹಿರೇಮಠ್ ಪೌರೋಹಿತ್ಯದಲ್ಲಿ‌ ರುದ್ರಾಭಿಷೇಕ, ಅಷ್ಟೋತ್ತರ ಮುಂತಾದ ಪೂಜೆ ನೆರವೇರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!