ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿದ ಕನ್ನಡ ಪುಸ್ತಕ ಹಬ್ಬ ಎಂಬ ಒಂದು ತಿಂಗಳು ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಇಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರು ಚಾಲನೆ ನೀಡಲಾಯಿತು. ಹಿರಿಯ ಪತ್ರಕರ್ತ, ಲೇಖಕರಾದ ಶ್ರೀ ಜೋಗಿ (ಗಿರೀಶ್ ರಾವ್ ಹತ್ವಾರ್) ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ನವೆಂಬರ್ 28ರವರೆಗೆ ನಡೆಯಲಿರುವ ಈ ಪುಸ್ತಕ ಹಬ್ಬದ ಉದ್ಘಾಟನೆ ಸಂದರ್ಭದಲ್ಲಿ ಗಣ್ಯರು ಆಡಿದ ಮಾತುಗಳಿವು-
ಸಾಹಿತ್ಯಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುವ ಕೆಲಸ ಮಾಡುತ್ತವೆ. ಹೊರಗಿನ ಕತ್ತಲನ್ನು ಹೋಗಲಾಡಿಸುವುದಕ್ಕೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳಿವೆ. ಬಹುಮುಖ್ಯವಾದ ಒಳಗಿನ ಕತ್ತಲನ್ನು ಹೋಗಲಾಡಿಸುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ
– ಡಾ. ಬಿ.ವಿ. ವಸಂತಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು
ಒಂದು ಪುಸ್ತಕ ಮತ್ತೊಂದು ಪುಸ್ತಕವನ್ನು ಓದಿಸುತ್ತದೆ. ಆ ಪ್ರಕ್ರಿಯೆ ಬದುಕನ್ನೇ ವಿಸ್ತಾರಗೊಳಿಸುತ್ತದೆ. ಪುಸ್ತಕಗಳು ಆತ್ಮವಿಶ್ವಾಸವನ್ನು ಬೆಳೆಸಿ, ಮಾನಸಿಕ ಯೋಧರನ್ನಾಗಿಸುತ್ತವೆ.
- ಜೋಗಿ, ಹಿರಿಯ ಪತ್ರಕರ್ತರು
ಈ ‘ಕನ್ನಡ ಪುಸ್ತಕ ಹಬ್ಬ’ವು ಅಕ್ಟೋಬರ್ 30ರಿಂದ ನವೆಂಬರ್ 28ರ ವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಾರಾಂತ್ಯದಲ್ಲಿ ವಿಶೇಷ ಉಪನ್ಯಾಸಗಳು, ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ. 3,000ಕ್ಕೂ ಅಧಿಕ ಶೀರ್ಷಿಕೆಯ ಪುಸ್ತಕಗಳು ಲಭ್ಯವಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಿಗೆ 40% ರಿಯಾಯಿತಿ ಹಾಗೂ ಇತರ ಪ್ರಕಾಶಕರ ಪುಸ್ತಕಗಳಿಗೆ 20% ರಿಯಾಯಿತಿ ಇರುತ್ತದೆ.
- ನಾ. ದಿನೇಶ್ ಹೆಗ್ಡೆ, ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ