ಬಿಡೆನ್‌ ಮನೆಯಲ್ಲಿ ಮತ್ತಷ್ಟು ಗೌಪ್ಯ ಸರ್ಕಾರಿ ದಾಖಲೆಗಳು ಪತ್ತೆ: ವಿವಾದದ ಸುಳಿಯಲ್ಲಿ ಅಮೆರಿಕ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಈಗ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಅವರ ಹಳೆಯ ಕಚೇರಿಯೊಂದರಲ್ಲಿ ಕೆಲ ಗೌಪ್ಯ ಸರ್ಕಾರಿ ದಾಖಲೆಯಗಳು ಪತ್ತೆಯಾಗಿದ್ದವು. ಇದೀಗ ಅವರ ಡೆಲವೇರ್‌ನಲ್ಲಿರುವ ಜೋ ಬಿಡೆನ್ ಅವರ ಕುಟುಂಬದ ಮನೆಯಲ್ಲಿ ಅತಿಗೌಪ್ಯ ಸರ್ಕಾರಿ ದಾಖಲೆಗಳು ಪತ್ತೆಯಾಗಿದ್ದು ಅಮೆರಿಕ ಅಧ್ಯಕ್ಷರಿಗೆ ಸಂಕಷ್ಟವನ್ನು ತಂದಿದೆ. ಈ ದಾಖಲೆಗಳು ಅತಿ ಗೌಪ್ಯವೆಂದು ವರ್ಗೀಕರಿಸಲ್ಪಟ್ಟಿರುವುದರಿಂದ ಅಧಿಕಾರ ದುರುಪಯೋಗದ ವಿವಾದ ಸುಳಿಯಲ್ಲಿ ಬಿಡೆನ್‌ ಸಿಲುಕಿದ್ದಾರೆ.

ಕೆಲದಿನಗಳ ಹಿಂದಷ್ಟೇ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ನಿವಾಸದಲ್ಲಿ ಕೆಲ ಅತಿಗೌಪ್ಯ ದಾಖಲೆಗಳು ಪತ್ತೆಯಾಗಿತ್ತು. ಟ್ರಂಪ್‌ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಡೆನ್‌ ನೇತೃತ್ವದ ಆಡಳಿತ ಪಕ್ಷ ಟ್ರಂಪ್‌ ಅವರ ವಿರುದ್ಧ ತನಿಖೆ ಜಾರಿ ಮಾಡಿತ್ತು. ಇದೀಗ ಅದೇ ವಿವಾದದಲ್ಲಿ ಬಿಡೆನ್‌ ಕೂಡ ಸಿಲುಕಿರುವುದು ಆಡಳಿತ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಬರಾಕ್‌ ಒಬಾಮಾ ಈ ಹಿಂದೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅಂದರೆ 2009-2017ರವರೆಗೆ ಜೋ ಬಿಡೆನ್‌ ಅಮೆರಿಕದ ಉಪಾಧ್ಯಕ್ಷರಾಗಿದ್ದರು. ಆ ಸಮಯದ ಕೆಲ ಗೌಪ್ಯ ಸರ್ಕಾರಿ ದಾಖಲೆಗಳು ಬಿಡೆನ್‌ ಅವರ ಬಳಿ ಪತ್ತೆಯಾಗಿದೆ. ಅವರ ಹಳೆಯ ಕಚೇರಿ ಪೆನ್‌ ಬಿಡೆನ್‌ ಸೆಂಟರಿನಲ್ಲಿ ಕೆಲ ಗೌಪ್ಯ ದಾಖಲೆಗಳು ಪತ್ತೆಯಾಗಿವೆ. ಇದೀಗ ಅವರ ಕುಟುಂಬದ ನಿವಾಸದಲ್ಲಿಯೂ ಮತ್ತಷ್ಟು ಗೌಪ್ಯ ದಾಖಲೆಗಳು ಪತ್ತೆಯಾಗಿವೆ.

ಅಮೆರಿಕದ ಕಾನೂನಿನ ಪ್ರಕಾರ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಯಾರೇ ಆದರೂ ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಅವರ ಬಳಿಯಿರುವ ಸರ್ಕಾರಿ ದಾಖಲೆಗಳನ್ನು ಹಿಂತಿರುಗಿಸಬೇಕು. ಆದರೆ ಈ ವಿಷಯದಲ್ಲಿ ಬಿಡೆನ್‌ ದಾಖಲೆಗಳನ್ನು ಹಿಂತಿರುಗಿಸಿಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ. ಅತ್ತ ಚುನಾವಣೆಗಳೂ ಕೂಡ ಎದುರಾಗುತ್ತಿರುವುದರಿಂದ ಅಮೆರಿಕದ ರಾಜಕೀಯದಲ್ಲಿ ಈಗ ಅಧಿಕಾರ ದುರುಪಯೋಗದ ವಿವಾದದ ಕುರಿತಾಗಿಯೇ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!