Thursday, July 7, 2022

Latest Posts

ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹಾವೇರಿ:

ಜಿಲ್ಲೆಯಲ್ಲಿ ಇಂಡಸ್ಟ್ರೀಯಲ್ ಟೌನ್ ಶಿಪ್ ಮಾಡೋ ಅಗತ್ಯವಿದೆ. ಹೆಚ್ಚು ಜನತೆಗೆ ಉದ್ಯೋಗವನ್ನು ನೀಡುವ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನ ಮಾಡುತ್ತೇನೆ. ಈ ಕುರಿತು ಒಂದು ವಾರದಲ್ಲಿ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ 20.82 ಕೋಟಿರೂ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಜಿಲ್ಲೆಯಲ್ಲಿ ಹಾವೇರಿ ಹಾಗೂ ಹಾನಗಲ್ಲಿನಲ್ಲಿ ಇಂಡಸ್ಟ್ರೀಯಲ್ ಟೌನ್ ಶಿಪ್ ಮಾಡೋ ಅಗತ್ಯವಿದೆ ಎಂದರು.
ಎಷ್ಟು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗಿದೆ ಎನ್ನುವುದಕ್ಕಿಂತ ಎಷ್ಟು ಜನರಿಗೆ ಉದ್ಯೋಗ ನೀಡಲಾಗುತ್ತದೆ ಎನ್ನುವುದು ಈ ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚು ಉದ್ಯೋಗವನ್ನು ನೀಡುವಂತಹ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಆದ್ಯತೆಯನ್ನು ನೀಡಲಿದೆ ಎಂದು ತಿಳಿಸಿದರು.
ಜನರ ಅಲೆದಾಟ ತಪ್ಪಿಸಲು, ತಂತ್ರಜ್ಞಾನ ಬಳಕೆ ಮಾಡಿಕೊಂಡು ಜನರಿಗೆ ಸೌಲಭ್ಯಗಳು ಸುಲಭದಲ್ಲಿ ಸಿಗೋ ವ್ಯವಸ್ಥೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮ ಮಟ್ಟದಲ್ಲೇ ಜನರಿಗೆ ಕೆಲವು ಸೇವೆಗಳನ್ನ ಕೊಡೋ ಕೆಲಸ ನಾವು ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿವೆ. ರಾಜ್ಯದಲ್ಲಿ ಜನಪರ, ಜನಸ್ನೇಹಿ ವ್ಯವಸ್ಥೆ ತರೋಕೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜನರಿಗೆ ಸುಸೂತ್ರವಾಗಿ ಸೇವೆಗಳು ಸಿಗುವಂತೆ ವ್ಯವಸ್ಥೆ. ಅಧಿಕಾರಿಗಳು ಕೊನೆಯ ಹಂತಕ್ಕೆ ಹೋಗಿ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಬಹಳಷ್ಟು ಬದಲಾವಣೆ ತರೋ ಯೋಜನೆಗಳು ನಮ್ಮ ಮುಂದಿವೆ. ಸಾಮಾನ್ಯ ಜನರಿಗೆ ಮರಳು ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ. ಗಣಿ ಮತ್ತು ಭೂ ಸಚಿವರಿಗೆ ಹೇಳಿದ್ದೇನೆ. ಸರಕಾರಿ ಯೋಜನೆಗಳು, ಆಶ್ರಯ ಮನೆಗಳಿಗೆ ಸೇರಿದಂತೆ ಸಾಮಾನ್ಯ ಜನರಿಗೂ ಮರಳು ಸಿಗುವಂತೆ ಯೋಜನೆ ರೂಪಿಸಲು ತಿಳಿಸಿದ್ದೇನೆ ಎಂದರು.
ಸೂಕ್ತವಾದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗುತ್ತದೆ. ಯಾವುದೂ ನೆನೆಗುದಿಗೆ ಬಿದ್ದಿಲ್ಲ. ವರದಿ-ಬೇಡ್ತಿ ನದಿ ಜೋಡಣೆ ಬಗ್ಗೆಯೂ ಈಗಾಗಲೆ ಪರಿಶೀಲನೆ ಮಾಡಲಾಗ್ತಿದೆ. ಹೊರಗಡೆಯಿಂದ ಬರೋ ವಿದ್ಯಾರ್ಥಿಗಳಿಗೆ ಏಳು ದಿನಗಳ ಕ್ವಾರಂಟೈನ್ ಮಾಡಿ ಚೆಕ್ ಮಾಡ್ತಿದ್ದೇವೆ. ಕೊಪ್ಪಳದಲ್ಲಿ ಶಾಲಾ ಮಕ್ಕಳಿಗೆ ಬಸ್ ಇಲ್ಲದ್ದಕ್ಕೆ ಜೆಸಿಬಿಯಲ್ಲಿ ಕೂರಿಸಿಕೊಂಡು ಹೋದ ವಿಚಾರ. ಈ ಘಟನೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಎಲ್ಲ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚನೆ ಕೊಟ್ಟಿದ್ದೇನೆ. ಗೊಟಗೋಡಿ ಜಾನಪದ ವಿವಿಯಲ್ಲಿನ ಖಾಯಂ ಸಿಬ್ಬಂಧಿಗಳ ನೇಮಕಕ್ಕೆ ಸಧ್ಯದಲ್ಲೇ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ನಗರಭಿವೃದ್ಧಿ ಸಚಿವ ಭೈರತಿ ಬಸವರಾಜ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss