ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು: ಶಾಸಕ ದೇವಾನಂದ ಚವ್ಹಾಣ

ಹೊಸದಿಗಂತ ವರದಿ, ವಿಜಯಪುರ:

ಬರುವ ರಾಜ್ಯ ಬಜೆಟ್ ನಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ನಾಗಠಾಣ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಇಂಡಿ ಹಾಗೂ ಚಡಚಣ ಭಾಗದಲ್ಲಿ ಮಹತ್ವಾಕಾಂಕ್ಷಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಯವರೇ ಇದ್ದರೂ ಈವರೆಗೂ ಚಾಲನೆ ನೀಡಿಲ್ಲ. ಈ ಹಿಂದಿನ ಸಮ್ಮಿಶ್ರ ಸರ್ಕಾರ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 2019- 20 ರ ಬಜೆಟ್ ಭಾಷಣದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಇಂಡಿ, ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹೊರ್ತಿ- ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಘೋಷಣೆ ಮಾಡಿತ್ತು. ಅನಂತರ ಬಂದ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಅಲ್ಲದೆ ನಾಗಠಾಣ ಮತಕ್ಷೇತ್ರವು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಕ್ಷೇತ್ರ, ನೀರು, ರಸ್ತೆ, ವಿದ್ಯುತ್, ವಸತಿ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ. ಬರುವ ಬಜೆಟ್ ನಲ್ಲಿ ಇವೆಲ್ಲ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ದೇಸು ಚವ್ಹಾಣ, ಗುಲಾಬ ಚವ್ಹಾಣ, ಎಂ.ಎ. ಬಗಲಿ, ವಸಂತಕುಮಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!