Tuesday, June 28, 2022

Latest Posts

ಕೋವಿಡ್ ನಿಯಂತ್ರಣ| ಪ್ರಕೃತಿ ವಿಕೋಪ ತಡೆಯಲು ಹೆಚ್ಚಿನ ನಿಗಾವಹಿಸಿ: ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಕೊಡಗು ಜಿಲ್ಲೆಯ 10 ರಿಂದ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಂತಹ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಜೊತೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಿ, ಸೋಂಕಿತ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ನಿರ್ದೇಶನ ನೀಡಿದರು.
ಕೋವಿಡ್ ನಿಯಂತ್ರಣ ಮತ್ತು ಪ್ರಾಕೃತಿಕ ವಿಕೋಪ ಸಿದ್ಧತೆ ಬಗ್ಗೆ ನಗರದ ಜಿ.ಪಂ.ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚು ಕಂಡುಬರುವ ಕಡೆ ಇತರರಿಗೆ ಹರಡದಂತೆ ಮುನ್ನೆಚ್ಚರ ವಹಿಸಬೇಕು. ಆ ದಿಸೆಯಲ್ಲಿ ಪಾಸಿಟಿವ್ ಬಂದವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು. ಇನ್ನೊಂದು ವಾರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕು. ಜೊತೆಗೆ ಮರಣ ಪ್ರಮಾಣವನ್ನು ಸೊನ್ನೆಗೆ ತರಬೇಕು. ಆ ನಿಟ್ಟಿನಲ್ಲಿ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆ ಮಾದರಿಯಾಗಬೇಕು. ಸೀಲ್‍ಡೌನ್ ಮಾಡುವ ಪ್ರದೇಶದ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಬೇಕು. ಗೃಹ ಸಂಪರ್ಕ ತಡೆ ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಸೋಂಕಿತರನ್ನು ಸರಿಯಾಗಿ ಗಮನಿಸಿದರೆ, ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದು ವಿ.ಅನ್ಬುಕುಮಾರ್ ಹೇಳಿದರು.
ಕೋವಿಡ್ ಪಾಸಿಟಿವಿ ಪ್ರಮಾಣ ಕಡಿಮೆ ಮಾಡಬೇಕು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ಸೋಂಕಿತರು ಹೆಚ್ಚು ಕಂಡುಬರುವ ಕಡೆ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು ಎಂದರು.
ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿ: ಈಗಾಗಲೇ ಮುಂಗಾರು ಆರಂಭವಾಗಿರುವುದರಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಲೋಪ ಉಂಟಾಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಮಳೆಹಾನಿ ಸಂಬಂಧ ಕಳೆದ ವರ್ಷದ ಕಾಮಗಾರಿಗಳನ್ನು ಪೂರ್ಣಗೊಳಿಸಿ ವರದಿ ನೀಡಬೇಕು. ಮಳೆ ಆರಂಭವಾದರೆ ನವೆಂಬರ್ ತನಕ ಯಾವುದೇ ಕಾಮಗಾರಿ ಕೈಗೊಳ್ಳಲು ಕಷ್ಟ ಸಾಧ್ಯವಾಗಲಿದೆ. ಆದ್ದರಿಂದ ಈಗಾಗಲೇ ಅನುಮೋದನೆ ಪಡೆಯಲಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್‌ ಗಳಿಗೆ ಅನ್ಬುಕುಮಾರ್ ಸೂಚಿಸಿದರು.
ಹೊರ ಬರದ ಕೈಪಿಡಿ: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವ ಸಂಬಂಧ ಕಿರುಪುಸ್ತಕ ಹೊರತರುವಂತೆ ಸಲಹೆ ಮಾಡಲಾಗಿತ್ತು.ಆದರೆ ಇದುವರೆಗೆ ಈ ಕೆಲಸ ಆಗಿಲ್ಲ, ಮುಂದಿನ ದಿನದಲ್ಲಿ ಕಿರುಪುಸ್ತಕ ಹೊರತರಬೇಕು. ಪ್ರವಾಹ ಹಾಗೂ ಭೂ ಕುಸಿತ ಸೂಕ್ಷ್ಮ ಪ್ರದೇಶಗಳ ನಿಖರ ಮಾಹಿತಿ ಒದಗಿಸಬೇಕು ಎಂದು ಅವರು ಹೇಳಿದರು.
ಅನುಮೋದನೆ ಪಡೆದಿಲ್ಲವೇಕೆ?: ಕಳೆದ ವರ್ಷ ಉಂಟಾದ ಮಳೆಹಾನಿ ಸಂಬಂಧಿಸಿದಂತೆ ಶೇ.70 ರಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲವೇಕೆ ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು, ಕಳೆದ ವರ್ಷದ ಮಳೆಹಾನಿ ಕಾಮಗಾರಿಗಳನ್ನು ಕೈಗೊಳ್ಳದೆ ಸಾರ್ವಜನಿಕರಿಗೆ ಉತ್ತರಿಸುವುದಾರೂ ಹೇಗೆ ಎಂದು ಎಂಜಿನಿಯರ್‌ ಗಳಿಗೆ ಎಚ್ಚರಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ, ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಈಗಾಗಲೇ ಸಭೆ ಮಾಡಿ ಹಲವು ಸಲಹೆ, ನಿರ್ದೇಶನ ನೀಡಲಾಗಿದೆ ಎಂದರು.
ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಮತ್ತು ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಸೂಕ್ಷ್ಮ ಪ್ರದೇಶಗಳಿಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ 19 ನಿಯಂತ್ರಣ ಸಂಬಂಧ ಹೆಚ್ಚಿನ ಗಮನಹರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ. ಅಗತ್ಯವಿದ್ದಲ್ಲಿ ಹೊಸ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಅನುಮತಿ ನೀಡಲಾಗುವುದು ಎಂದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಮಾತನಾಡಿ, ಕೋವಿಡ್ ನಿಯಂತ್ರಣ ಹಾಗೂ ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಗ್ರಾ.ಪಂ.ಮಟ್ಟದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನರ್ಸರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಾರಿ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆ ದಿಸೆಯಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಜಿ.ಪಂ.ಸಿಇಒ ಅವರು ಜಿ.ಪಂ.ಆಡಳಿತಾಧಿಕಾರಿಯೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಮಾಹಿತಿ ನೀಡಿ, ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಈಗಾಗಲೇ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಲ್ಲಿ ಸಹಾಯವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಎನ್‍ಡಿಆರ್ ಎಫ್ ತಂಡ ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದೆ. ಜಿಎಸ್‍ಐ ವತಿಯಿಂದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.
ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ವಿವಿಧ ಇಲಾಖೆಗಳಿಗೆ ಬೇಕಿರುವ ರೈನ್ ಕೋಟ್, ಗಂಬೂಟ್, ಕೊಡೆ ಹಾಗೂ ಇತರೆ ಅಗತ್ಯ ಉಪಕರಣಗಳನ್ನು ಪೂರೈಸಲು ಕ್ರಮವಹಿಸಲಾಗಿದೆ. ಹಾಗೆಯೇ ಭಾಗಮಂಡಲದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಬೋಟ್ ಹಾಗೂ ಗೃಹ ರಕ್ಷಕದಳದವರನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ ಎಂದರು.
ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಮೋಹನ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಮಂಜುನಾಥ್, ಜಿ.ಪಂ.ಎಂಜಿನಿಯರ್ ಶ್ರೀಕಂಠಯ್ಯ, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ಸೆಸ್ಕ್ ಎಂಜಿನಿಯರ್ ಅಶೋಕ್ ಮತ್ತಿತರರು ಹಲವು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss