Thursday, July 7, 2022

Latest Posts

ಚಿತ್ರದುರ್ಗ ಜೆಲ್ಲೆಗೆ ಕೆಪಿಟಿಸಿಎಲ್ ಮೊದಲ ಹಂತದ ಕಾಮಗಾರಿ ಬಳಿಕ ಇನ್ನಷ್ಟು ಯೋಜನೆಗಳು ಜಾರಿ: ಸಚಿವ ವಿ.ಸುನಿಲ್

ಹೊಸದಿಗಂತ ವರದಿ,ಚಿತ್ರದುರ್ಗ

ಕೆಪಿಟಿಸಿಎಲ್ ನಿಂದ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಎರಡನೇ ಹಂತದಲ್ಲಿ ಜಿಲ್ಲೆಗೆ ಇನ್ನಷ್ಟು ಕಾಮಗಾರಿಗಳು ಲಭ್ಯವಾಗಲಿವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನಿಲ್ ಕುಮಾರ್ ತಿಳಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಜಿಲ್ಲೆಯ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ಕಾಮಗಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿಯಲ್ಲಿ ೪೦೦/೨೨೦ ಕೆವಿ ವಿದ್ಯುತ್ ಕೇಂದ್ರದಿಂದ ೨೨೦/೬೬ ಕೆವಿ ಹಿರಿಯೂರು ವಿದ್ಯುತ್ ಕೇಂದ್ರಕ್ಕೆ ಹಾಲಿ ಇರುವ ಕಾರಿಡಾರ್‌ನಲ್ಲಿ ಏಕ ಪ್ರಸರಣ ಮಾರ್ಗದ ನಿರ್ಮಾಣ ಕಾಮಗಾರಿ ಹಾಗೂ ೪೦೦/೨೨೦ ಕೆವಿ ಹಿರೇಮಲ್ಲನಹೊಳೆ ಜಗಳೂರು ವಿದ್ಯುತ್ ಕೇಂದ್ರದಿಂದ ಚಿತ್ರದುರ್ಗ ೨೨೦/೬೬/೧೧ ಕೆ.ವಿ ವಿದ್ಯುತ್ ಕೇಂದ್ರದವರೆಗೆ ೨೨೦/೬೬ ಕೆ.ವಿ ಜೋಡಿ ವಿದ್ಯುತ್ ಮಾರ್ಗದ ನಿರ್ಮಾಣ ಕಾಮಗಾರಿ ನಡೆಸಲಾಗುವುದು ಎಂದರು.
ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದ ಹತ್ತಿರ ೨*೧೦೦ ಎಂವಿಎ, ೨೨೦/೬೬/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರದ ಮತ್ತು ಸಂಬಂಧಿಸಿದ ೬೬ ಕೆ.ವಿ ಮತ್ತು ೨೨೦ ಕೆವಿ ಮಾರ್ಗಗಳ ನಿರ್ಮಾಣ ಕಾಮಗಾರಿ, ಹೊಸದುರ್ಗ-ಮತ್ತೋಡು-ಪಂಚನಹಳ್ಳಿ ೬೬ ಕೆವಿ ಪ್ರಸರಣ ಮಾರ್ಗದ ನಿರ್ಮಾಣ, ಹೊಸದುರ್ಗ-ರಾಮಗಿರಿ ೬೬ ಕೆವಿ ಪ್ರಸರಣ ಮಾರ್ಗದ ನಿರ್ಮಾಣ, ಹೊಸದುರ್ಗ-ಹಾಲುರಾಮೇಶ್ವರ ೬೬ ಕೆವಿ ಪ್ರಸರಣ ಮಾರ್ಗದ ನಿರ್ಮಾಣ ಹಾಗೂ ಹೊಸದುರ್ಗ-ಗರಗ ೬೬ ಕೆವಿ ಪ್ರಸರಣ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಆದರೆ ಕಳೆದ ಮೂರು ವರ್ಷಗಳಿಂದಲೂ ವಿವಿಧ ಕಾರಣಗಳಿಂದ ಕುಂಠಿತವಾಗಿ ನಡೆಯುತ್ತಿವೆ ಎಂದು ಹೇಳಿದರು.
ವಿದ್ಯುತ್ ಗೋಪುರ ನಿರ್ಮಾಣ ಹಾಗೂ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಸಮಸ್ಯೆಗಳು ಎದುರಾದಾಗ, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯ ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜಿಲ್ಲೆಯ ಮೂರು ಯೋಜನೆಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಚಿತ್ರದುರ್ಗ ಜಿಲ್ಲೆ ಹಾಗೂ ರಾಜ್ಯಕ್ಕೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ರಾಜ್ಯದಲ್ಲಿ ಒಂಭತ್ತು ಯೋಜನೆಗಳನ್ನು ತೆಗೆದುಕೊಳ್ಳಲಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಯೋಜನೆಗಳು ಇದ್ದು, ಈ ಯೋಜನೆಗಳು ಪೂರ್ಣಗೊಂಡಿಲ್ಲ ಎಂಬುದು ರಾಜ್ಯಮಟ್ಟದ ವರದಿಯಲ್ಲಿ ಪ್ರಸ್ತಾಪವಾದ ಹಿನ್ನಲೆಯಲ್ಲಿ ಸಭೆ ನಡೆಸಿ ಅಗತ್ಯಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಮೂರು ವರ್ಷಗಳ ಹಿಂದೆ ಈ ಯೋಜನೆಯು ಪ್ರಾರಂಭವಾಗಿದೆ. ಆದರೆ ಮೂರು ತಾಲ್ಲೂಕುಗಳಲ್ಲಿ ಈ ಯೋಜನೆಯು ಪೂರ್ಣಗೊಳ್ಳದ ಕಾರಣ ಈ ಯೋಜನೆಯು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಯೋಜನೆ ಪೂರ್ಣಗೊಳಿಸಿದರೆ ಮಾತ್ರ ಕೇಂದ್ರ ಸರ್ಕಾರವು ಎರಡನೇ ಹಂತದ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ಮತ್ತೆ ೧೩ ಯೋಜನೆಗಳನ್ನು ನೀಡಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಹಾಗಾಗಿ ತಕ್ಷಣವೇ ಕಾಲಮಿತಿಯೊಳಗೆ ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಎನ್. ಮಂಜುಳಾ ಮಾತನಾಡಿ, ಕೆಪಿಟಿಸಿಎಲ್ ವತಿಯಿಂದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಡಿಪಿಆರ್ ಸಿದ್ದಪಡಿಸಿ ಹಾದು ಹೋಗುವ ಮಾರ್ಗಗಳಲ್ಲಿ ಬರುವ ಅರಣ್ಯ ಪ್ರದೇಶ ಸೇರಿದಂತೆ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿರುತ್ತದೆ. ಆದಾಗ್ಯೂ ಚಿತ್ರದುರ್ಗ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಇದಕ್ಕೆ ಸಹಕಾರ ನೀಡುತ್ತಿಲ್ಲ.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಕೆಪಿಟಿಸಿಎಲ್ ತಾಂತ್ರಿಕ ವಿಭಾಗದ ನಿರ್ದೇಶಕ ಚಂದ್ರಶೇಖರ್, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಆದಿನಾರಾಯಣ, ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss